ಆರ್ ಟಿಐ ಕಾರ್ಯಕರ್ತನ ಕೊಲೆಗೆ ಸುಪಾರಿ; ೬ ಮಂದಿ ಸೆರೆ

ಬೆಂಗಳೂರು,ಮಾ.೧೦-ಕುಂಬಳಗೂಡಿನ ಆರ್ ಟಿಐ ಕಾರ್ಯಕರ್ತ ನಾಗರಾಜ್ ಕೆ ರವರ ಕೊಲೆಗೆ ಸುಪಾರಿ ನೀಡಿ ಕೊಲೆ ಪ್ರಯತ್ನ ನಡೆಸಿದ್ದ ಕುಖ್ಯಾತ ರೌಡಿ ಕೃಷ್ಣ ಸೇರಿ ೬ ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಗರಭಾವಿಯ ಬೈರವೇಶ್ವರನಗರದ ಚಂದ್ರಲೇಔಟ್ ಪೊಲೀಸ್ ಠಾಣೆಯ ರೌಡಿ ಕೃಷ್ಣ (೩೦)ಮನೀಶ್ ಮೋಹನ್ ಪೂಜಾರಿ (೨೮), ಶಶಿಕುಮಾರ್ ರೆಡ್ಡಿ ವಿ (೨೦) ಸತೀಶ್(೪೨) ವೇಣುಗೋಪಾಲ್ ಎ ಅಲಿಯಾಸ್ ಕುಮಾರಸ್ವಾಮಿ(೫೧) ಕುಂಬಳಗೂಡು ಕಣಿಮಿಣಿಕೆಯ ಗೋವಿಂದರಾಜು ಕೆ.ಜಿ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಕಳೆದ ೨೯ ರಂದು ಪಿರ್ಯಾದು ದಾರರಾದ ನಾಗರಾಜ್ ಕೆ ಕೆಂಗೇರಿ ಪೊಲೀಸ್ ಠಾಣೆಯ ಸರಹದ್ದಿನ ರೈಲ್ವೆ ಅಂಡರ್ ಪಾಸ್ ಬಳಿ ಹೋಗುತ್ತಿದ್ದ ನಾಗರಾಜ್ ರನ್ನು ಬಂಧಿತ ಆರೋಪಿಗಳು ಅಡ್ಡಗಟ್ಟಿ, ಲಾಂಗ್ ನಿಂದ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದು ಈ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೆಂಗೇರಿ ಪೊಲೀಸರು ತಂಡವನ್ನು ರಚಿಸಿಕೊಂಡು ಕಾರ್ಯಾಚರಣೆ ಕೈಗೊಂಡು ಖಚಿತವಾದ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳು ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರ ಲಾಂಗ್, ಒಂದು ಸ್ಕೂಟರ್ ಅನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.
ಆರೋಪಿ ಕೃಷ್ಣ ರವರು ಚಂದ್ರ ಲೇಔಟ್ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದು, ಮನೀಶ್ ಮೋಹನ್ ಪೂಜಾರಿಯ ವಿರುದ್ಧ ಚಂದ್ರ ಲೇಔಟ್, ಜ್ಞಾನಭಾರತಿ ಉಪ್ಪಾರಪೇಟೆ ಹಾಗೂ ಇತರೆ ಪೊಲೀಸ್ ಠಾಣೆಗಳಲ್ಲಿ ಹಲವಾರು ಕಳ್ಳತನ, ಹಲ್ಲೆ ಪ್ರಕರಣಗಳು ದಾಖಲಾಗಿರುತ್ತವೆ. ಇವರುಗಳು ಕುಂಬಳಗೂಡಿನ ವಾಸಿ ಆರ್.ಟಿ.ಐ ಕಾರ್ಯಕರ್ತ ನಾಗರಾಜ್ ಕೆ ರವರನ್ನು ಆರ್.ಟಿ.ಐ ಹಾಕಿದ್ದರ ವಿಚಾರವಾಗಿ ಸುಪಾರಿ ಪಡೆದು ಕೊಲೆ ಮಾಡಲು ಪ್ರಯತ್ನಿಸಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದು ತಿಳಿಸಿದರು.
ಕೆಂಗೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಕೋಟ್ರೇಶಿ ಬಿ.ಎಂ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮಣಿಕಂಠ, ಶ್ರೇಯಸ್ ಅವರುಗಳ ಪತ್ತೆ ಕಾರ್ಯ ಮುಂದುವರೆದಿದೆ ಎಂದರು.