ಆರ್ ಟಿಇ ದಿನಾಚರಣೆ- ರಾಜ್ಯಮಟ್ಟದ ಸಮಾವೇಶ

ದಾವಣಗೆರೆ.ನ.೧೫: ಶಿಕ್ಷಣ ಹಕ್ಕು ಕಾಯ್ದೆಯನ್ನು ಹತ್ತನೇ ತರಗತಿವರೆಗೆ ವಿಸ್ತರಿಸುವುದು. ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ತಡೆಗಟ್ಟುವುದು. ಆರ್ ಟಿಇ ಮರುಚಾಲನೆ, ಸುಪ್ರೀಂಕೋರ್ಟ್ ಪ್ರಕರಣ ಕುರಿತು ಪರಾಮರ್ಶೆ ಸೇರಿದಂತೆ ಮುಂಬರುವ 2022ರಲ್ಲಿ  ಆರ್ ಟಿಇ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ಆರ್ ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಎನ್ ಯೋಗಾನಂದ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಹಕ್ಕು ಕಾಯ್ದೆ 2009ರಲ್ಲಿ ಜಾರಿಗೆ ಬಂದಿದ್ದು,  ಕರ್ನಾಟಕ ರಾಜ್ಯದಲ್ಲಿ 2012 ರಿಂದ ಜಾರಿಯಲ್ಲಿದೆ. ಸುಮಾರು ಆರೂವರೆ ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಶೇಕಡಾ ಇಪ್ಪತ್ತೈದರಷ್ಟು ಸೀಟು ಉಚಿತವಾಗಿ ಪಡೆದು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಈ ಕಾಯ್ದೆಯ ಪ್ರಕಾರ ವಿದ್ಯಾರ್ಥಿಗಳಿಗೆ ಶಿಕ್ಷಣವು ಕೇವಲ ಎಂಟನೇ ತರಗತಿವರೆಗೆ ಇದ್ದು, ಇದನ್ನು ಮಾನವೀಯ ದೃಷ್ಟಿಯಿಂದ ಕನಿಷ್ಠ ಹತ್ತನೇ ತರಗತಿ ವರೆಗೆ ಮುಂದುವರಿಸಬೇಕು. ಈ ಕುರಿತ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರನ್ನು ಒತ್ತಾಯಿಸಿದರು.ರಾಜ್ಯ ಸರ್ಕಾರ ಪ್ರತಿ ವರ್ಷ 2ಸಾವಿರ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ನೀಡುತ್ತಿರುವುದು ಸರಿಯಷ್ಟೆ. ಆದರೆ ಇಲ್ಲಿ ತರಬೇತಿ ಪಡೆದ ಶಿಕ್ಷಕರು ಇಲ್ಲದೆ ಸರಿಯಾದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸಾಧ್ಯವಾಗುತ್ತಿಲ್ಲ.ಇದರಿಂದಾಗಿ ಮಕ್ಕಳು ಆಂಗ್ಲ ಮಾಧ್ಯಮ ಕಲಿಯದಂತಾಗಿದೆ. ಕಾರಣ ತರಬೇತಿ ಹೊಂದಿದ ಶಿಕ್ಷಕರನ್ನು ಶಿಕ್ಷಕರು ಸಿಗದ ಹೊರತು ಆಂಗ್ಲಮಾಧ್ಯಮವನ್ನು ತಡೆಹಿಡಿಯಬೇಕು. ಈ ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿದರು.ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ 2019 ರಲ್ಲಿ ಆರ್ ಟಿಇ ನಿಯಮ ಕ್ಕೆ ತಿದ್ದುಪಡಿ ತಂದು ತಂದಿದೆ. ಇದರಿಂದಾಗಿ ಹಲವಾರು ಮಕ್ಕಳು ಶಾಲೆಯಿಂದ ಹೊರಗೆ ಉಳಿಯುವಂತೆ ಆಗಿದೆ. ಅಂದಿನ ಸರ್ಕಾರ ಖಾಸಗಿ ಶಾಲೆಗಳ ಲಾಬಿ ಲಾಬಿಗೆ ಮಣಿದು  ತಿದ್ದುಪಡಿ ತಂದಿದ್ದು ಇದರಿಂದಾಗಿ ಮಕ್ಕಳಿಗೆ ಅನಾನೂಕುಲವಾಗಿದೆ. ಕಾರಣ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಈ ಕೂಡಲೇ ಹಿಂಪಡೆಯಬೇಕೆಂದು ಮನವಿ ಮಾಡಿದರು.ಈ ಎಲ್ಲಾ ವಿಷಯಗಳ ಕುರಿತಂತೆ ಮುಂಬರುವ 2022ರ ಏಪ್ರಿಲ್ 1ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ರಾಜ್ಯದ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಪ್ರತಿನಿಧಿಗಳು, ಶಿಕ್ಷಕರು, ಪೋಷಕರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಶಿಕ್ಷಣ ಸಂಸ್ಥೆಗಳು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಆಗುವ ಅನಾನುಕೂಲಗಳನ್ನು ಚರ್ಚಿಸಿ ಸರ್ಕಾರದ ಮುಂದಿಡಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಣಬೇರು ಶಿವಮೂರ್ತಿ, ಬಸವರಾಜಪ್ಪ, ಶ್ಯಾಗಲೆ ಮಲ್ಲೇಶ್ ಇತರರು  ಇದ್ದರು.