
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಸೆ 4 :- ಮಂಗಳೂರು ಮೂಲದ ಆರ್ ಕೆ ಶೆಟ್ಟಿ ಅವರು ಹೋಟೆಲ್ ಉದ್ಯಮ ಹರಸಿ ಬಂದು ಕೂಡ್ಲಿಗಿಯಂತಹ ಹಿಂದುಳಿದ ತಾಲೂಕು ಕೇಂದ್ರದಲ್ಲಿ ಉದ್ಯಮ ಪ್ರಾರಂಭಿಸುವ ಮೂಲಕ ಅದರ ಜೊತೆಗೆ ಕೂಡ್ಲಿಗಿ ಪ್ರದೇಶದ ಸುತ್ತಮುತ್ತಲಿನ ಜನತೆಗೆ ಕನ್ನಡದ ಕಂಪು ಹರಿಸಿದ ಕನ್ನಡದ ಶಕ್ತಿಯಾಗಿದ್ದಾರೆ ಹಾಗೂ ಸಮಾಜಮುಖಿ ಚಿಂತಕ ಎಂದರೆ ತಪ್ಪಾಗದು ಎಂದು ಕನ್ನಡ ಸಾಹಿತ್ಯ ಪರಿಷತ್ ನ ಬಳ್ಳಾರಿ ಜಿಲ್ಲಾ ಅಧ್ಯಕ್ಷ ನಿಷ್ಠಿ ರುದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ಗುಡೇಕೋಟೆ ರಸ್ತೆಯ ಹಿರೇಮಠ ಕಲ್ಯಾಣ ಮಂಟಪದಲ್ಲಿ ಕನ್ನಡ ಮಿತ್ರಸಂಘ ಕೂಡ್ಲಿಗಿ ಹಾಗೂ ದಿ. ಆರ್ ಕೆ ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ಕೂಡ್ಲಿಗಿ ಇವರ ಸಹಯೋಗದಲ್ಲಿ ಆಯೋಜಿಸಿದ ಉದ್ಯಮಿ, ಕೊಡುಗೈ ದಾನಿ, ಆರ್ ಕೆ ಶೆಟ್ಟಿ ಅವರಿಗೆ ಇಂದು ನುಡಿನಮನ ಸ್ವರ ಶ್ರದ್ದಾಂಜಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತ ಆರ್ ಕೆ ಶೆಟ್ಟಿ ಅವರಿಗೆ ಕನ್ನಡ ಎಂದರೆ ಎಲ್ಲಿಲ್ಲದ ಪ್ರೀತಿ ಕೂಡ್ಲಿಗಿಯಲ್ಲಿ ಕನ್ನಡ ಮಿತ್ರ ಸಂಘ ಕಟ್ಟುವ ಮೂಲಕ ಕನ್ನಡ ಪರ ಕಾರ್ಯಕ್ರಮವನ್ನು ಆಯೋಜಿಸಿ ಕನ್ನಡವನ್ನು ಉಳಿಸುವಲ್ಲಿ ಅವರ ಕೊಡುಗೆ ಅಪಾರವೆಂದೇ ಹೇಳಬಹುದು ಅಲ್ಲದೆ ಕೂಡ್ಲಿಗಿ ಪಟ್ಟಣದ ವೀರಭದ್ರೇಶ್ವರ ಚಿತ್ರಮಂದಿರದ ಹಿಂದೆ ಇರುವ ಅವರ ನಿವೇಶನವನ್ನು ಕನ್ನಡಭವನ ನಿರ್ಮಾಣಕ್ಕೆ ದಾನ ಮಾಡಿದ ಕೊಡುಗೈ ದಾನಿ ಎನ್ನಬಹುದು ಈಗಾಗಲೇ ಕನ್ನಡಭವನ ನಿರ್ಮಾಣಕ್ಕೆ ಈ ಭಾಗದ ಶಾಸಕರ ಗಮನಕ್ಕೆ ತರಲಾಗಿದ್ದು ಆ ಕಟ್ಟಡ ನಿರ್ಮಾಣಕ್ಕೆ ಆರ್ ಕೆ ಶೆಟ್ಟಿ ಅವರ ಹೆಸರನ್ನು ಇಡಲಾಗುವುದು ಎಂದು ನಿಷ್ಠಿ ರುದ್ರಪ್ಪ ತಿಳಿಸಿದರು.
ಸಾನಿದ್ಯ ವಹಿಸಿದ್ದ ಕೊಟ್ಟೂರು ಚಾನುಕೋಟಿ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಆರ್ ಕೆ ಶೆಟ್ರು ಕೂಡ್ಲಿಗಿ ಕೊಟ್ಟೂರು ಸೇರಿದಂತೆ ಜಿಲ್ಲೆಯಲ್ಲಿ ಕನ್ನಡದ ಕಾರ್ಯಕ್ರಮಗಳು ನಡೆದಲ್ಲಿ ಹಾಜರಾಗುತ್ತಿದ್ದ ಅಪ್ಪಟ ಕನ್ನಡದ ಪ್ರೇಮಿ ಹಾಗೂ ಭಾಷಾಭಿಮಾನಿ ಅವರು ಹೋಟೆಲ್ ಉದ್ಯಮದ ಜೊತೆಗೆ ಸಾಂಸ್ಕೃತಿಕ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಅವರ ಅಪಾರ ಕನ್ನಡ ಪ್ರೇಮ, ಕನ್ನಡಭವನಕ್ಕೆ ನಿವೇಶನವನ್ನು ದಾನವಾಗಿ ಕರುಣಿಸಿದ ಇಂತಹ ಸಹೃದಯಿ ನಮ್ಮ ಕಣ್ಮುಂದೆ ಇಲ್ಲದೆ ಇರಬಹುದು ಆದರೆ ಅವರ ಉತ್ತಮ ಕಾರ್ಯ ಚಿರಸ್ಮರಣಿಯ ಎಂದರು ಮತ್ತು ಅದೆಲ್ಲದಕ್ಕೂ ಮುಖ್ಯವಾಗಿ ಕಡಿಮೆ ಪ್ರಮಾಣದ ವ್ಯಾಸಂಗ ಮಾಡಿದ್ದ ಆರ್ ಕೆ ಶೆಟ್ಟಿ ಅವರು ಒಬ್ಬ ಶಿಕ್ಷಣ ಪ್ರೇಮಿ ಎನ್ನುವುದಕ್ಕೆ ಬರೀ ಬೀಡಿ ಕಟ್ಟುವ, ಹೂವು ಮಾರುವ, ಕೂಲಿಯಿಂದ ಜೀವನ ನಡೆಸುವ ಮಕ್ಕಳು ವ್ಯಾಸಂಗ ಮಾಡುತ್ತಿದ್ದ ಕೂಡ್ಲಿಗಿ ಪಟ್ಟಣದ ಒಂದನೇ ವಾರ್ಡ್ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡು ಅಲ್ಲಿನ ಮಕ್ಕಳಿಗೆ ಬುಕ್ ಪೆನ್ನು ಸ್ಲೇಟ್ ಹಾಗೂ ಊಟದ ತಟ್ಟೆಗಳನ್ನು ವಿತರಿಸುತ್ತಿದ್ದರು ಹಾಗೂ ಕಾಣದ ಕೊಡುಗೈ ದಾನಿ ಎಂಬಂತೆ ಅನೇಕ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಿದ ಉತ್ತಮ ಕಾರ್ಯ ಇವರದ್ದಾಗಿದೆ ಇವರು ಕನ್ನಡದ ಆಸ್ತಿ ಎಂದರೆ ತಪ್ಪಾಗದು ಇವರ ಕಾರ್ಯಕ್ಕೆ ಇವರ ಕುಟುಂಬ ಸಹ ಸಹಕಾರಿಯಾಗಿದೆ ಎಂದು ಹೇಳಬಹುದಾಗಿದೆ ಕೂಡ್ಲಿಗಿ ಭಾಗದ ಶಿವಪುರ ಹಾಗೂ ಹೋಟೆಲ್ ನಲ್ಲಿರುವ ಮದ್ಯ ವ್ಯಸನಿಗಳಿಗೆ ದುಶ್ಚಟದಿಂದ ದೂರ ಮಾಡುವ ಪ್ರಯತ್ನ ಮಾಡಿ ಸಫಲತೆ ಕಂಡಿದ್ದಾರೆಂದು ಹೇಳಬಹುದಾಗಿದೆ.
ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಮಾತನಾಡಿ ಆರ್ ಕೆ ಶೆಟ್ಟಿಯವರನ್ನು ನಾನು ಚಿಕ್ಕವನಾಗಿದ್ದಾಗಿಂದಲೂ ನೋಡಿದ್ದೇನೆ ಅವರದು ಮಕ್ಕಳಂತಹ ಮುಗ್ದ ಮನಸ್ಸಿನವರು ಅಜಾತಶತ್ರು ಎಂದರೆ ತಪ್ಪಾಗದು ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ ಶಿವರಾಜ, ಕ ಸಾ ಪ ತಾಲೂಕು ಅಧ್ಯಕ್ಷ ಅಂಗಡಿ ವೀರೇಶ, ನಿಕಟ ಪೂರ್ವ ಅಧ್ಯಕ್ಷ ಎನ್ ಎಂ ರವಿಕುಮಾರ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕಾಟೆರ್ ಹಾಲೇಶ, ಹಿರಿಯ ರಂಗಭೂಮಿ ಕಲಾವಿದೆ ಹಾಗೂ ನಾಟಕ ಅಕಾಡೆಮಿ ಮಾಜಿ ಸದಸ್ಯೆ ಪಿ ಪದ್ಮ ಹಾಗೂ ಇತರರು ಆರ್ ಕೆ ಶೆಟ್ಟಿ ಅವರ ಕುರಿತು ಮಾತನಾಡಿದರು.ಬಿಜೆಪಿ ರಾಜ್ಯ ಮುಖಂಡ ಬಂಗಾರು ಹನುಮಂತು, ಪೌರಾಕಾರ್ಮಿಕರ ಸಂಘದ ರಾಜ್ಯಧ್ಯಕ್ಷ ಪ್ರಭಾಕರ, ವಕೀಲ ದುರುಗೇಶ, ಕಾವಲ್ಲಿ ಶಿವಪ್ಪ ನಾಯಕ ಸೇರಿದಂತೆ ಇತರರಿದ್ದರು.
ಇದೇ ಸಂದರ್ಭದಲ್ಲಿ ಆರ್ ಕೆ ಶೆಟ್ರು ದತ್ತು ತೆಗೆದುಕೊಂಡಿರುವ ಶಾಲೆಯ ಮಕ್ಕಳಿಗೆ ಪುಸ್ತಕ ಪೆನ್ನು ಸೇರಿದಂತೆ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಹಾಗೂ ಅಲ್ಲಿನ ಶಿಕ್ಷಕರ ಅಭಿಪ್ರಾಯ ಪಡೆಯಲಾಯಿತು. ಹಾಗೂ ವಿಶಾಲ್ ಮೆಲೋಡಿಯಸ್ ಹೊಸಪೇಟೆ ಇವರಿಂದ ಆರ್ ಕೆ ಶೆಟ್ಟಿ ಅವರ ಈ ಕಾರ್ಯಕ್ರಮದಲ್ಲಿ ವಿಶಾಲ್ ಹಾಗೂ ಸಂಗಡಿಗರು ಭಕ್ತಿಯ ಗೀತಾಗಾಯನ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಪತ್ನಿ ವಿನೋದ ಆರ್ ಶೆಟ್ಟಿ, ಹಾಗೂ ಮಕ್ಕಳಾದ ವಿನಾಯಕ ಹಾಗೂ ಯೋಗೀಶ್ ಶೆಟ್ಟಿ ಮತ್ತು ಕುಟುಂಬ ವರ್ಗದವರು ಭಾಗವಹಿಸಿದ್ದರು. ಮತ್ತು ಕೂಡ್ಲಿಗಿ ಪಟ್ಟಣದ ಅವರ ಆಪ್ತಮಿತ್ರರು ಹಾಗೂ ಇತರರು ಸ್ವರನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.