ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ವಿಶ್ವ ಓಆರ್‌ಎಸ್ ದಿನಾಚರಣೆ

ಕೋಲಾರ,ಆ.೬-ಓಆರ್‌ಎಸ್ ಎಂಬುದು ಮಕ್ಕಳಿಗೆ ಸಂಜೀವಿನಿ ಇದ್ದ ಹಾಗೆ. ಮಕ್ಕಳಿಗೆ ವಾಂತಿ ಮತ್ತು ಬೇದಿ ಆದಾಗ ಈ ಓಆರ್‌ಎಸ್ ಎಂಬ ದ್ರವ್ಯವು ಬಹಳ ಉಪಯುಕ್ತವಾಗಿ ಕೆಲಸ ಮಾಡುತ್ತದೆ,ಮಕ್ಕಳ ಪಾಲಿಕೆ ಸಂಜೀವಿನಿ ಎಂದು ಆರ್.ಎಲ್.ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಜೆ.ಕೃಷ್ಣಪ್ಪ ಹೇಳಿದರು.
ನಗರದ ಹೊರವಲಯದ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಆವರಣದಲ್ಲಿ ಮಕ್ಕಳ ವಿಭಾಗದಿಂದ ಹಮ್ಮಿಕೊಂಡಿದ್ದ ವಿಶ್ವ ಓಆರ್‌ಎಸ್ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಸುಧಾರೆಡ್ಡಿ ಒಆರ್‌ಎಸ್ ದ್ರವ್ಯವನ್ನು ತಯಾರಿ ಮಾಡಿಕೊಳ್ಳುವ ಸುಲಭ ವಿಧಾನವನ್ನು ತಿಳಿಸಿಕೊಟ್ಟರು.
ಉಪ ವೈದ್ಯಕೀಯ ಅಧೀಕ್ಷಕ ಡಾ.ಕೆ.ದಿನೇಶ್ ಮಾತನಾಡಿ, ಮೂಢನಂಬಿಕೆಗಳಿಗೆ ಕಿವಿಗೊಡದೆ ಪೋಷಕರು ಸರಿಯಾದ ಸಮಯದಲ್ಲಿ ಈ ಓಆರ್‌ಎಸ್‌ನ್ನು ಮಕ್ಕಳಿಗೆ ಕೊಡುವುದರಿಂದ ಅನೇಕ ಜೀವಗಳನ್ನು ಉಳಿಸಬಹುದು ಎಂದು ತಿಳಿಸಿದರು. ಪ್ರತಿ ವರ್ಷವು ಜುಲೈ ೨೯ ರಂದು ವಿಶ್ವ ಒಆರ್‌ಎಸ್ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ನೆರೆದಿದ್ದ ಪೋಷಕರಿಗೆ ತಿಳಿಸಿದರು.
ಮಕ್ಕಳ ವಿಭಾಗದ ಡಾ.ನರೇಂದ್ರ ಮಾತನಾಡಿ, ಈ ಓಆರ್‌ಎಸ್ ಪುಡಿಯು ಎಲ್ಲಾ ಔಷಧಾಲಯಗಳಲ್ಲಿ ತುಂಬ ಕಡಿಮೆ ದರದಲ್ಲಿ ದೊರೆಯುತ್ತದೆ ಎಂದು ತಿಳಿಸಿದರು.
ಸಮುದಾಯ ವಿಭಾಗದ ಮುಖ್ಯಸ್ಥರಾದ ಡಾ.ಪ್ರಸನ್ನಕಾಮತ್ ಮಾತನಾಡಿ, ಮಕ್ಕಳಿಗೆ ಸರಿಯಾದ ಸಮಯದಲ್ಲಿ ನಿಗದಿತ ಚುಚ್ಚುಮದ್ದುಗಳನ್ನು ಕಡ್ಡಾಯವಾಗಿ ಕೊಡಿಸುವುದರಿಂದ ಅನೇಕ ಕಾಯಿಲೆಗಳನ್ನು ಮಕ್ಕಳಲ್ಲಿ ತಡೆಗಟ್ಟಬಹುದೆಂದು ಪೋಷಕರಿಗೆ ತಿಳುವಳಿಕೆ ನೀಡಿದರು.
ಕಾರ್ಯಕ್ರಮವನ್ನು ಡಾ.ವರ್ಷರವರು ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು. ಮಕ್ಕಳ ವಿಭಾಗದ ಎಲ್ಲಾ ವೈದ್ಯರು, ಆಸ್ಪತ್ರೆಯ ನರ್ಸಿಗ್ ವಿಭಾಗದ ಸಿಸ್ಟರ್ ಜಬಮನಿ ಮತ್ತು ಅವರ ತಂಡದವರು ಉಪಸ್ಥಿತರಿದ್ದರು. ಅನೇಕ ಪೋಷಕರು ಈ ಉತ್ತಮವಾದ ಕಾರ್ಯಕ್ರಮದ ಲಾಭವನ್ನು ಪಡೆದರು.