ಆರ್.ಆರ್. ನಗರ ಮತದಾನಕ್ಕೆ ಬಿಗಿಭದ್ರತೆ

ಬೆಂಗಳೂರು, ನ.೧-ಇಂದು ಸಂಜೆಯೊಳಗೆ ಮತದಾರರು ಅಲ್ಲದ ವ್ಯಕ್ತಿಗಳು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಹೊರ ಹೋಗಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್ ತಿಳಿಸಿದರು. ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕೆ ಬಿಗಿಭದ್ರತೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿ ಸಭಾಂಗಣದಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,

ಇಂದು ಸಂಜೆ ೬ ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಚುನಾಚಣೆಗೆ ೪೮ ಗಂಟೆಗೆ ಮುನ್ನ ಇದು ಮುಕ್ತಾಯವಾಗಬೇಕು. ಆರ್ ಆರ್ ನಗರದ ಮತದಾರರು ಹೊರತುಪಡಿಸಿ ಬೇರೆ ಯಾರೂ ಆ ಕ್ಷೇತ್ರದಲ್ಲಿ ವಾಸ್ತವ್ಯ ಇರುವಹಾಗಿಲ್ಲ. ಬೇರೆ ಕಡೆಯಿಂದ ಪ್ರಚಾರಕ್ಕೆ ಬಂದಿರುವ ಮುಖಂಡರೂ ಸಹಿತ ಎಲ್ಲರೂ ಆ ಕ್ಷೇತ್ರ ಬಿಟ್ಟು ಹೊರಬರಬೇಕು. ಇಲ್ಲವಾದಲ್ಲಿ ಅವರ ಮೇಲೆ ಪ್ರಕರಣ ದಾಖಲಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಮತದಾನ ಪ್ರಕ್ರಿಯೆ ಸಂಬಂಧಿಸಿದಂತೆ ಹೆಚ್ಚುವರಿ ಸಿದ್ಧತೆಗಳನ್ನು ಮಾಡಲಾಗಿದೆ. ವಾರ್ಡ್ ಗಳಿಗೆ ಹೆಚ್ಚುವರಿ ಒಂಭತ್ತು ಫ್ಲೈಯಿಂಗ್ ಸ್ಕ್ಯಾಡ್, ಮಾರ್ಷಲ್ಸ್ ಗಳನ್ನು ೩೬ ಜನರ ನಿಯೋಜನೆ, ವೀಡಿಯೋ ವಿವಿಟಿ ಟೀಂ ಐದು ತಂಡ, ೫೬ ಸೆಕ್ಟರ್ ಅಧಿಕಾರಿಗಳು, ಎಂಟು ಅಬಕಾರಿ ಫ್ಲೈಯಿಂಗ್ ಸ್ಕ್ವಾಡ್, ಹೆಚ್ಚಿನ ವಾಹನ ತಪಾಸಣೆ, ಕಲ್ಯಾಣ ಮಂಟಪ ಮೊದಲಾದ ಕಡೆ ಹೆಚ್ಚು ಜನ ಸೇರಿದಂತೆ ನೋಡಿಕೊಳ್ಳಲಾಗುತ್ತದೆ ಎಂದು ವಿವರಿಸಿದರು.

ನಾಳೆ ಬೆಳಗ್ಗೆ ಮಸ್ಟರಿಂಗ್ ಸೆಂಟರ್ ತೆರಯಲಿದ್ದು, ಚುನಾವಣಾ ಸಿಬ್ಬಂದಿಗಳು ಜ್ಞಾನಾಕ್ಷಿ ವಿದ್ಯಾನಿಕೇತನದಲ್ಲಿ ಸೇರಲಿದ್ದಾರೆ. ಮತಯಂತ್ರಗಳನ್ನು ತೆಗೆದುಕೊಂಡು ಮಧ್ಯಾಹ್ನದ ವೇಳೆ ನಿರ್ದಿಷ್ಟ ಮತಗಟ್ಟೆಗೆ ಹೋಗಲಿದ್ದಾರೆ.

ಮಂಗಳವಾರ ಬೆಳಗ್ಗೆ ೭ ಗಂಟೆಗೆ ಮತದಾನ ಆರಂಭವಾಗಲಿದೆ. ಪ್ರತೀ ಮತಗಟ್ಟೆಗೆ ಒಬ್ಬೊಬ್ಬ ಆರೋಗ್ಯಾಧಿಕಾರಿ ನೇಮಕ ಮಾಡಲಾಗಿದ್ದು, ಮಾಸ್ಕ್ ಸ್ಯಾನಿಟೈಸ್ ಮಾಡಲು, ಕೈ ಗ್ಲೌಸ್ ಕೊಡಲಾಗುವುದು.

ಅಲ್ಲದೆ, ಕೋವಿಡ್ ರೋಗಿಗಳಿಗೆ ಕಂಟ್ರೋಲ್ ರೂಂ ನಿಂದ ಫೋನ್ ಕರೆ ಮಾಡಲಾಗಿದೆ.
ಕೆಲವರು ನಾವು ಮಾಡೋದಿಲ್ಲ ಎಂದಿದ್ದು, ಎಲ್ಲವೂ ನಾಳೆ ಗೊತ್ತಾಗಲಿದೆ ಎಂದು ತಿಳಿಸಿದರು.

ಮದ್ಯ ಮಾರಾಟ ನಿಷೇಧ
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿ, ನ.೩ರಂದು ಮತದಾತ ನಡೆಯಲಿದ್ದು ಮುಂಜಾಗ್ರತ ಕ್ರಮವಾಗಿ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ನವೆಂಬರ್ ೧ರ ಸಂಜೆ ೫ ಗಂಟೆಯಿಂದ ನ.೩ರ ಮಧ್ಯಾರಾತ್ರಿ ೧೨ ಗಂಟೆವರೆಗೆ ಮದ್ಯ ಮಾರಾಟ ನಿಷೇಧಗೊಳಿಸಲಾಗಿದ್ದು ಇದೇ ವೇಳೆ ಮತ ಎಣಿಕೆ ನಡೆಯಲಿರುವ ನವೆಂಬರ್ ೧೦ರಂದು ಸಹ ನಿಷೇಧ ಜಾರಿಗೊಳಿಸಲಾಗಿದೆ.

ಇನ್ನೂ ಕ್ಷೇತ್ರದಲ್ಲಿ ೮೨ ಸೂಕ್ಷ್ಮ, ೫೯೬ ಸಾಮಾನ್ಯ ಮತಗಟ್ಟೆಗಳಿಗೆ. ಸೂಕ್ತ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದ್ದು,
ಸೆಕ್ಟರ್ ಮೊಬೈಲ್ ಗೆ ೧೯ ಮಂದಿ ಸೂಪರ್ ವೈಸರ್, ೩೨ ಹೊಯ್ಸಳ ಮೊಬೈಲ್ ಗಳನ್ನು ಬೇರೆಕಡೆಯಿಂದ ನೇಮಿಸಲಾಗಿದೆ. ೯೧ ಚೀತಾ ತಂಡಗಳು ಸೇರಿ ಒಟ್ಟು ೨೫೬೩ ಮಂದಿ ಭದ್ರತಾ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ವಿವರಿಸಿದರು.

ಚುನಾವಣಾ ಆಯೋಗದ ಆದೇಶದಂತೆ ಮತದಾನ ಪ್ರಕ್ರಿಯೆ ನಡೆದ ಬಳಿಕ ದೃಶ್ಯ ಮತ್ತು ವಿದ್ಯುನ್ಮಾನ ಮಾಧ್ಯಮಗಳು
ಎಕ್ಸಿಟ್ ಪೋಲ್ ಅನ್ನು ನ. ೩ರಿಂದ ಬೆಳಗ್ಗೆ ೬ ರಿಂದ ೭ ನೇ ತಾರೀಖಿನ ಸಾಯಂಕಾಲ ವರೆಗೆ ಮಾಡುವಂತಿಲ್ಲ.

ದರ್ಶನ್ ಮೇಲೆ ಪ್ರಕರಣ ದಾಖಲು

ಕೋವಿಡ್ ನಿಯಮ ಉಲ್ಲಂಘನೆ ಆರೋಪ ಸಂಬಂಧಿಸಿದಂತೆ ನಟ ದರ್ಶನ್ ಮೇಲೆ ಇಲ್ಲಿನ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇರೀತಿ, ಎಂಸಿಸಿ ನೀತಿ ಸಂಹಿತೆ ಉಲ್ಲಂಘನೆ ಅಡಿ ಐದು ಪ್ರಕರಣ ದಾಖಲು ಮಾಡಲಾಗಿದೆ.