ಆರ್‌ಸಿಬಿ – ಸನ್‌ರೈಸರ್ಸ್ ಕಾದಾಟ

ದುಬೈ, ನ ೬- ಸತತ ೪ ಸೋಲಿನ ನಡುವೆಯೂ ಪ್ಲೇಆಫ್ಗೇರಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸತತ ೩ ಗೆಲುವಿನೊಂದಿಗೆ ಪ್ಲೇಆಫ್ ಅವಕಾಶ ಒಲಿಸಿಕೊಂಡಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಐಪಿಎಲ್-೧೩ರಲ್ಲಿ ಇಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ’ಸೆಮಿಫೈನಲ್’ ಮಾದರಿಯ ೨ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಲಿದ್ದರೆ, ಸೋತ ತಂಡ ೪ನೇ ಸ್ಥಾನಕ್ಕೆ ತೃಪ್ತಿಪಡಲಿದೆ.

ಉಭಯ ತಂಡಗಳು ಪರಸ್ಪರ ಮುಖಾಮುಖಿಯಾಗುವ ಮೂಲಕವೇ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ್ದವು. ಅದರಲ್ಲಿ ವಿರಾಟ್ ಕೊಹ್ಲಿ ಪಡೆ ಗೆದ್ದು ಶುಭಾರಂಭ ಕಂಡಿದ್ದರೂ, ಲೀಗ್ ಹಂತದ ಮುಕ್ತಾಯದ ವೇಳೆಗೆ ಉಭಯ ತಂಡಗಳ ಪರಿಸ್ಥಿತಿ ತದ್ವಿರುದ್ಧವಾಗಿತ್ತು. ಮೊದಲ ೧೦ ಪಂದ್ಯಗಳಲ್ಲಿ ೭ರಲ್ಲಿ ಜಯಿಸಿದ್ದ ಆರ್‌ಸಿಬಿ ನಂತರದ ನಾಲ್ಕೂ ಪಂದ್ಯ ಸೋತಿದ್ದರೆ, ಮೊದಲ ೯ ಪಂದ್ಯಗಳಲ್ಲಿ ೬ರಲ್ಲಿ ಸೋತಿದ್ದ ಸನ್‌ರೈಸರ್ಸ್ ನಂತರದ ೫ ಪಂದ್ಯಗಳಲ್ಲಿ ೪ರಲ್ಲಿ ಗೆದ್ದು ಪ್ಲೇ ಆಫ್‌ಗೇರಿದೆ. ಹೀಗಾಗಿ ಈ ಬಾರಿ ಮೇಲ್ನೋಟಕ್ಕೆ ಡೇವಿಡ್ ವಾರ್ನರ್ ಬಳಗವೇ ಫೇವರಿಟ್ ಎನಿಸಿದ್ದರೂ, ಆರ್‌ಸಿಬಿ ತಂಡ ತಿರುಗಿಬಿದ್ದರೆ ಕಪ್ ಗೆಲುವಿನ ಹೋರಾಟ ಮುಂದುವರಿಸಬಹುದಾಗಿದೆ.

ಸತತ ೪ ಸೋಲು ಕಂಡರೂ ಮುನ್ನಡೆದಿರುವ ವಿರಾಟ್ ಕೊಹ್ಲಿ ಬಳಗಕ್ಕೆ ಇನ್ನು ಯಾವುದೇ ಎಡವಟ್ಟು ಮಾಡಿಕೊಳ್ಳಲು ಅವಕಾಶವಿಲ್ಲ. ಇನ್ನೊಂದು ಪಂದ್ಯದಲ್ಲಿ ಎಡವಿದರೂ ಕಪ್ ಗೆಲುವಿನ ಆಸೆ ಕೈಚೆಲ್ಲಬೇಕಾಗುತ್ತದೆ. ಪ್ಲೇಆಫ್ ಹಂತದಲ್ಲಿ ಕಪ್ ಗೆಲುವಿನ ಅಸಲಿ ಆಟ ಶುರುವಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡರೆ ಆರ್‌ಸಿಬಿ ಪುಟಿದೇಳಬಹುದು. ತಂಡದ ಬ್ಯಾಟಿಂಗ್ ವಿಭಾಗ ಕೈಕೊಡುತ್ತಿರುವುದು ಆರ್‌ಸಿಬಿಗೆ ದೊಡ್ಡ ಹಿನ್ನಡೆಯಾಗಿದೆ. ಕನ್ನಡಿಗ ದೇವದತ್ ಪಡಿಕಲ್ ೫ ಅರ್ಧಶತಕ ಸಿಡಿಸುವ ಮೂಲಕ ಸ್ಥಿರ ನಿರ್ವಹಣೆ ತೋರಿದ್ದಾರೆ.

ಹ್ಯಾಟ್ರಿಕ್ ಗೆಲುವಿನೊಂದಿಗೆ ಲೀಗ್ ಹಂತ ಮುಕ್ತಾಯಗೊಳಿಸಿರುವ ಸನ್‌ರೈಸರ್ಸ್ ತಂಡ ಉತ್ತಮ ಲಯದಲ್ಲಿದೆ. ಅದರಲ್ಲೂ ಪ್ಲೇಆಫ್ ಹಂತಕ್ಕೇರಿರುವ ಉಳಿದ ೩ ತಂಡಗಳನ್ನೇ ಸನ್‌ರೈಸರ್ಸ್ ತನ್ನ ಕೊನೇ ೩ ಲೀಗ್ ಪಂದ್ಯಗಳಲ್ಲಿ ಮಣಿಸಿದೆ ಎಂಬುದು ಗಮನಾರ್ಹ. ಈ ಮೂಲಕ ಪ್ರಶಸ್ತಿ ಗೆಲುವಿನ ಸಾಮರ್ಥ್ಯ ತನಗಿದೆ ಎಂಬುದನ್ನೂ ಸನ್‌ರೈಸರ್ಸ್ ನಿರೂಪಿಸಿದೆ.
ಪಂದ್ಯ ಆರಂಭ: ರಾತ್ರಿ ೭.೩೦
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್