ಆರ್‌ಸಿಬಿ ಬೌಲರ್‌ಗಳಿಗೆ ಯಾರ್ಕರ್‌ ಪಾಠ ಹೇಳಿಕೊಟ್ಟ ಬೌಲಿಂಗ್ ಕೋಚ್ ಗ್ರಿಫಿತ್


ನವದೆಹಲಿ, ಸೆ.14-ಯಾರ್ಕರ್‌ ಬೌಲಿಂಗ್‌ ಯಾವುದೇ ಮಾದರಿಯ ಕ್ರಿಕೆಟ್‌ನಲ್ಲಿ ಬೌಲರ್‌ಗಳ ಅತ್ಯಂತ ಬಲಿಷ್ಠ ಅಸ್ತ್ರಗಳಲ್ಲಿ ಒಂದು. ಅದರಲ್ಲೂ ಯಾರ್ಕರ್‌ ಸ್ಪೆಷಲಿಸ್ಟ್‌ ಎನಿಸಿಕೊಂಡ ಬೌಲರ್‌ಗಳು ಟಿ20 ಕ್ರಿಕೆಟ್‌ನಲ್ಲಿ ಸ್ಟಾರ್‌ ಆಟಗಾರರಾಗಿ ಕಂಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಆದ್ದರಿಂದಲೇ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 13ನೇ ಆವೃತ್ತಿ ಆರಂಭಕ್ಕೂ ಮೊದಲು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್ನ ಬೌಲರ್‌ಗಳ ಯಾರ್ಕರ್‌ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. ತಂಡದ ಅಭ್ಯಾಸ ಶಿಬಿರದಲ್ಲಿ ಬೌಲರ್‌ಗಳಿಗೆ ಯಾರ್ಕರ್‌ ಎಸೆಯುವ ವಿಶೇಷ ಚಟುವಟಿಕೆ ನೀಡಿ ಅದರ ವಿಡಿಯೋವನ್ನು ತನ್ನ ಸೋಷಿಯಲ್‌ ಮೀಡಿಯಾ ವೇದಿಕೆಗಳ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದೆ.

ಒಂದೆಡೆ ಬೌಲರ್‌ಗಳು ಯಾರ್ಕರ್‌ ಆಟದಲ್ಲಿ ನಾ ಮುಂದು ತಾ ಮುಂದು ಎಂದು ಅಂಕ ಗಳಿಸಲು ಪೈಪೋಟಿ ನಡೆಸುತ್ತಿದ್ದರೆ, ಇತ್ತ ಬೌಲರ್‌ಗಳನ್ನು ಹುರಿದುಂಬಿಸುತ್ತಿದ್ದ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಅಂಕ ಗಳಿಸಿದ ಪ್ರತಿಯೊಬ್ಬ ಬೌಲರ್‌ನ ಜೊತೆಗೂ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದರು. ಮುಖ್ಯ ಕೋಚ್‌ ಸೈಮನ್‌ ಕ್ಯಾಟಿಚ್ ಮತ್ತು ಬೌಲಿಂಗ್ ಕೋಚ್‌ ಆಡಮ್‌ ಗ್ರಿಫಿತ್‌ ಈ ಯಾರ್ಕರ್‌ ಆಟದ ಉಸ್ತುವಾರಿ ವಹಿಸಿಕೊಂಡಿದ್ದರು.

“ನಮ್ಮ ತಂಡದ ಬೌಲಿಂಗ್ ಕೋಚ್‌ ಆಡಮ್‌ ಗ್ರಿಫಿತ್ ಬೌಲರ್‌ಗಳಿಗಾಗಿ ಅತ್ಯಂತ ಮೋಜಿನ ಯಾರ್ಕರ್‌ ಸ್ಪರ್ಧೆಯನ್ನು ಆಯೋಜಿಸಿದ್ದರು. ಅಂದಹಾಗೆ ಇಲ್ಲಿ ಹೇಳಬಯಸುವಿದೇನೆಂದರೆ ನಮ್ಮ ಬೌಲರ್‌ಗಳೆಲ್ಲರೂ ಶಾರ್ಪ್‌ ಶೂಟರ್‌ಗಳು,” ಎಂದು ಆರ್‌ಸಿಬಿ ತನ್ನ ಸೋಷಿಯಲ್‌ ಮೀಡಿಯಾ ಗೋಡೆ ಮೇಲೆ ಬರೆಯುವ ಮೂಲಕ ವಿಡಿಯೋ ಹಂಚಿಕೊಂಡಿದೆ.

ಯಾರ್ಕರ್‌ ಆಟದಲ್ಲಿ ಇಸುರು ಉದನಾ, ನವದೀಪ್‌ ಸೈನಿ, ಯುಜ್ವೇಂದ್ರ ಚಹಲ್, ಶಿವಂ ದುಬೆ ಮತ್ತು ಶಹಬಾಝ್ ಅಹ್ಮದ್ ಯಾರ್ಕರ್‌ ಎಸೆಯುವುದರಲ್ಲಿ ಅದ್ಭುತ ಸ್ಥಿರತೆ ಪ್ರದರ್ಶಿಸಿದರು. ಆರ್‌ಸಿಬಿ ತಂಡಕ್ಕೆ ಈ ಹಿಂದೆ ಕೈಕೊಟ್ಟಿರುವುದು ಬೌಲಿಂಗ್‌ ವಿಭಾಗ. ಹೀಗಾಗಿ ಬೌಲಿಂಗ್‌ ಬಲ ಹೆಚ್ಚಿಸುವ ಕಡೆಗೆ ವಿಶೇಷ ಒತ್ತನ್ನು ನೀಡಲಾಗಿದೆ ಎಂಬುದು ಈ ಮೂಲಕ ಸ್ಪಷ್ಟವಾಗಿದೆ.

ಐಪಿಎಲ್‌ 2020 ಟೂರ್ನಿಯು ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರವರೆಗೆ ಯುಎಇನಲ್ಲಿ ನಡೆಯಲಿದ್ದು, ಬಯೋ ಸೆಕ್ಯೂರ್‌ ವಾತಾವರಣ ಇರುವ ದುಬೈ, ಶಾರ್ಜಾ ಮತ್ತು ಅಬುದಾಭಿ ಕ್ರೀಡಾಂಗಣಗಳಲ್ಲಿ ಸಂಪೂರ್ಣ 60 ಪಂದ್ಯಗಳ ಆಯೋಜನೆ ಆಗಲಿದೆ. ಆರ್‌ಸಿಬಿ ತಂಡ ಸೆ.21ರಂದು ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಸವಾಲು ಎದುರಿಸಲಿದೆ.

ಇನ್ನು ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಪಾಲ್ಗೊಂಡಿರುವ ಮೊಯೀನ್‌ ಅಲಿ, ಆರೊನ್‌ ಫಿಂಚ್‌ ಮತ್ತು ಆಡಮ್‌ ಝಾಂಪ ಸೆ.17ರಂದು ಯುಎಇಗೆ ಆಗಮಿಸಿ 6 ದಿನಗಳ ಕ್ವಾರಂಟೈನ್‌ ನಂತರ ತಂಡವನ್ನು ಸೇರಿಕೊಳ್ಳಲಿದ್ದಾರೆ. ಕ್ರಿಸ್‌ ಮಾರಿಸ್, ಇಸುರು ಉದನಾ, ಡೇಲ್‌ ಸ್ಟೇನ್ ಮತ್ತು ಎಬಿ ಡಿ’ವಿಲಿಯರ್ಸ್‌ ಈಗಾಗಲೇ ತಂಡ ಸೇರಿಕೊಂಡಿದ್ದು ಭರ್ಜರಿ ತಾಲೀಮು ನಡೆಸಿದ್ದಾರೆ. ಕೇನ್‌ ರಿಚರ್ಡ್ಸನ್ ಅವರ ಬದಲಿಗೆ ಆಡಮ್‌ ಝಾಂಪ ಈ ಬಾರಿ ಆರ್‌ಸಿಬಿ ಪರ ಆಡಲಿದ್ದಾರೆ.