ಆರ್‌ಸಿಬಿ ದೌರ್ಬಲ್ಯ ಬಿಚ್ಚಿಟ್ಟ ಆಕಾಶ್‌ ಚೋಪ್ರಾ!

ನವದೆಹಲಿ, ಸೆ ೧೫- ವಿರಾಟ್ ಕೊಹ್ಲಿ ನಾಯಕತ್ವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಚೊಚ್ಚಲ ಐಪಿಎಲ್‌ ಟ್ರೊಫಿ ಗೆಲ್ಲುವ ಗುರಿಯೊಂದಿಗೆ ಟೂರ್ನಿಗೆ ಆಗಮಿಸಲಿದೆ. ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಆಕಾಶ್‌ ಚೋಪ್ರಾ, ಪ್ರಸ್ತುತ ಆರ್‌ಸಿಬಿ ತಂಡದಲ್ಲಿ ಎದ್ದು ಕಾಣುತ್ತಿರುವ ದೌರ್ಬಲ್ಯವನ್ನು ಗುರುತಿಸಿದ್ದಾರೆ.
ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಮಾಜಿ ಆಟಗಾರ, ಆರ್‌ಸಿಬಿ ತಂಡದ ಬಗ್ಗೆ ಹಲವು ಸಂಗತಿಗಳ ಬಗ್ಗೆ ವಿಶ್ಲೇಷಿಸಿದ್ದಾರೆ. ಬೆಂಗಳೂರು ಫ್ರಾಂಚೈಸಿಯ ಡೆತ್‌ ಓವರ್‌ ಬ್ಯಾಟಿಂಗ್‌ ಹಾಗೂ ಡೆತ್‌ ಓವರ್‌ಗಳಲ್ಲಿ ಬೌಲಿಂಗ್‌ ಸಮಸ್ಯೆ ಇನ್ನೂ ಬಗೆಹರಿಯದೆ ಉಳಿದಿದೆ ಎಂದು ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ರಾಯಲ್‌ ಚಾಲೆಂಜರ್ಸ್ ಬೆಂಗಲೂರು ತಂಡದಲ್ಲಿ ಕೆಲವು ಎದ್ದು ಕಾಣುವ ದೌರ್ಬಲ್ಯಗಳಿವೆ. ಮೊದಲ ದೊಡ್ಡ ಹರಾಜಿನಲ್ಲಿ ನೀವು ಉತ್ತಮ ಪಾತ್ರವಹಿಸದೇ ಹೋದರೆ, ನೀವು ಯಾವಾಗಲೂ ಹಿನ್ನಡೆ ಅನುಭವಿಸುತ್ತಲೇ ಇರುತ್ತೀರಿ ಎಂಬುದು ನಿಜ. ತಂಡದಲ್ಲಿರುವ ಅಗತ್ಯ ಬೇಡಿಕೆಗಳನ್ನು ಪೂರೈಸಲು ನೀವು ಮಿನಿ ಹರಾಜಿಗೆ ಹೋಗಿದ್ದೇ ಆದಲ್ಲಿ, ಸರಿಯಾದ ಆಟಗಾರರನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದು ಎಲ್ಲಾ ಆವೃತ್ತಿಗಳಿಗೂ ಬಗೆಹರಿಯದ ಸಮಸ್ಯೆ ಆಗಿಯೇ ಉಳಿಯುತ್ತದೆ,” ಎಂದು ಆಕಾಶ್‌ ಚೋಪ್ರಾ ತಿಳಿಸಿದರು.

“ಆರ್‌ಸಿಬಿ ಸಮಸ್ಯೆಗಳಲ್ಲಿ ಡೆತ್‌ ಓವರ್‌ಗಳಲ್ಲಿನ ಬ್ಯಾಟಿಂಗ್‌ ಕೂಡ ಒಂದು. ಇನಿಂಗ್ಸ್ ಕೊನೆಯವರೆಗೂ ವಿರಾಟ್‌ ಕೊಹ್ಲಿ ಅಥವಾ ಎಇಬಿ ಡಿವಿಲಿಯರ್ಸ್ ಆಡಿದರೆ ಒಳ್ಳೆಯದು, ಇಲ್ಲವಾದಲ್ಲಿ ಯಾರು ಆಡಲಿದ್ದಾರೆ? ಮೊಯಿನ್ ಅಲಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್ ಮತ್ತು ಕ್ರಿಸ್ ಮೋರಿಸ್ ಅವರನ್ನು ಹೊಂದಿರುವ ಕಾರಣ ತಂಡ ಮೊದಲಿಗಿಂತ ಉತ್ತಮವಾಗಿದ್ದರೂ ಇದು ಕಳವಳಕಾರಿ ಸಂಗತಿಯಾಗಿದೆ,” ಎಂದರು.