ಆರ್‌ಟಿಪಿಸಿಆರ್ ಪರೀಕ್ಷೆ ಸಿದ್ಧತೆ : ಸುಧಾಕರ್ ಪರಿಶೀಲನೆ

ಬೆಂಗಳೂರು,ಡಿ.೧- ವಿದೇಶದಿಂದ ನಗರಕ್ಕೆ ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕರಿಗೂ ಕಡ್ಡಾಯವಾಗಿ ಇಂದಿನಿಂದ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಇಂದು ಇಲ್ಲಿ ತಿಳಿಸಿದ್ದಾರೆ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಲು ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ .ಕ್ವಾಂರಂಟೈನ್, ಟೆಲಿಮೆಡಿಸಿನ್, ಕಡ್ಡಾಯ ಮಾಸ್ಕ್ ಧರಿಸುವುದು ಸೇರಿದಂತೆ ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೊಸ ರೂಪಾಂತರಿ ಸೋಂಕು ಭೀತಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕ್ರಮಗಳು ಮತ್ತು ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.

ರಾಜ್ಯಕ್ಕೆ ಪ್ರತಿದಿನ ಎರಡು ಸಾವಿರಕ್ಕೂ ಅಧಿಕ ಮಂದಿ ವಿದೇಶದಿಂದ ಬರುತ್ತಿದ್ದಾರೆ ಎಲ್ಲರಿಗೂ ಪರೀಕ್ಷೆ ನಡೆಸಲು ಸೂಕ್ತ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಆರೋಗ್ಯ ಸಚಿವರನ್ನು ನಾಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು ದೆಹಲಿಯಲ್ಲಿ ಭೇಟಿ ಮಾಡಿ ಆರೋಗ್ಯ ಕಾರ್ಯಕರ್ತರಿಗೆ , ಮುಂಚೂಣಿ ಕಾರ್ತಕರ್ತರಿಗೆ ಹೆಚ್ಚುವರಿ ಲಸಿಕೆ ನೀಡುವ ಕುರಿತು ಚರ್ಚೆ ನಡೆಸಲಿದ್ದಾರೆ. ಕೇಂದ್ರ ಸರ್ಕಾರ ಅನುಮತಿ ನೀಡಿದರೆ ರಾಜ್ಯದಲ್ಲಿ ಹೆಚ್ಚುವರಿ ಲಸಿಕೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಜನರು ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಹೊಸ ಪ್ರಭೇದದ ಸೋಂಕು ಮಣಿಸುವ ತನಕ ಹೋರಾಟ ಮುಂದುವರಿಸಬೇಕು ಇದಕ್ಕೆ ಜನರ ಸಹಕಾರ ಅಗತ್ಯ ಎಂದು ಅವರು ಹೇಳಿದರು.

ಸರಕಾರದಿಂದ ಎಲ್ಲವನ್ನು ನಿಭಾಯಿಸಲು ಸಾಧ್ಯವಿಲ್ಲ ಹೀಗಾಗಿ ಸಾರ್ವಜನಿಕರು ಮತ್ತು ನಾಗರಿಕ ಸಮಾಜದ ಸಹಕಾರ ಮತ್ತು ಸಹಭಾಗಿತ್ವ ಅಗತ್ಯ ಆಗ ಮಾತ್ರ ಸರ್ಕಾರದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನ ತರಲು ಸಾಧ್ಯ ಎಂದು ಅವರು ಹೇಳಿದರು.

ದಂಡ ಹಾಕಲ್ಲ:

ನಿನ್ನೆ ತಜ್ಞರ ಸಭೆಯಲ್ಲಿ ಅನೇಕ ಸಲಹೆಗಳನ್ನು ನೀಡಿದ್ದಾರೆ ಅದನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ದಂಡ ಹಾಕುವುದರಿಂದ ,ಸೇವೆ ಕಡಿತ ಮಾಡುವುದರಿಂದ ಉಪಯೋಗವಾಗುವುದಿಲ್ಲ. ಬದಲಾಗಿ ಪ್ರತಿಯೊಬ್ಬರಿಗೂ ಲಸಿಕೆ ನೀಡಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ .

ಕ್ರಿಸ್ ಮಸ್ ಆಚರಣೆಗೆ ನಿರ್ಬಂಧ ವಿಧಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು

ಲಸಿಕೆ ಕೊರತೆಯಿಲ್ಲ

ಎರಡನೇ ಡೋಸ್ ಲಸಿಕೆ ಪಡೆಯಲು ಜನರು ಮುಂದಾಗಿದ್ದು ಎಲ್ಲಾ ಜಿಲ್ಲೆಗಳಲ್ಲಿ ಜನರು ಮುಂದೆ ಬರಬೇಕು ರಾಜ್ಯದಲ್ಲಿ ಯಾವುದೇ ಭಾಗದಲ್ಲಿ ಲಸಿಕೆ ಕೊರತೆ ಇಲ್ಲ ಎಂದು ಸಚಿವ ಸುಧಾಕರ್ ಅವರು ಹೇಳಿದರು. ರಾಜ್ಯದಲ್ಲಿ ಇನ್ನೂ ಒಂದು ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ಬಾಕಿ ಇದೆ ಅಗತ್ಯ ಇರುವ ಜನರಿಗೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.