ಆರ್‌ಎಸ್‌ಎಸ್ ಮುಖಂಡ ಹೊಳ್ಳ ಮೃತ್ಯು ಪ್ರಕರಣ ಟಿಪ್ಪರ್ ಚಾಲಕನ ಬಂಧನ: ಟಿಪ್ಪರ್ ವಶ


ಪುತ್ತೂರು: ಪುತ್ತೂರು- ಮಾಣಿ ಹೆದ್ದಾರಿಯ ಪೋಳ್ಯ ಎಂಬಲ್ಲಿ ಡಿ.೧೫ ರಂದು ನಸುಕಿನ ಜಾವ ಬೈಕ್‌ನಲ್ಲಿ ತೆರಳುತ್ತಿದ್ದ ಸಂಘ ಪರಿವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗ್ರಾಮ ವಿಕಾಸ ಮಂಗಳೂರು ವಿಭಾಗ ಪ್ರಮುಖ್ ಆಗಿರುವ ಬಂಟ್ವಾಳ ಅಗ್ರಬೈಲು ನಿವಾಸಿ ವೆಂಕಟ್ರಮಣ ಹೊಳ್ಳ ಅವರ ಮೃತ್ಯುವಿಗೆ ಕಾರಣವಾದ ಟಿಪ್ಪರ್ ಚಾಲಕನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದು, ಟಿಪ್ಪರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಭೀಕರ ಅಪಘಾತದ ಕುರಿತು ತನಿಖೆ ನಡೆಸಿದ ಪುತ್ತೂರು ಸಂಚಾರ ಪೊಲೀಸರು ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಮತ್ತು ಮೊಬೈಲ್ ಜಿಪಿಎಸ್ ಆಧಾರದಲ್ಲಿ ಅಪಘಾತ ನಡೆಸಿದ ಟಿಪ್ಪರ್ ಚಾಲಕ ಮತ್ತು ಟಿಪ್ಪರನ್ನು ಪತ್ತೆ ಹಚ್ಚಿದ್ದಾರೆ. ಪುತ್ತೂರಿನ ಅರಿಯಡ್ಕದ ದಿನೇಶ್ ಕುಮಾರ್ ಮಾಲಕತ್ವದ ಟಿಪ್ಪರನ್ನು ಚಾಲಕ ಪಾಣಾಜೆಯ ಚರಣ್ ಎಂಬಾತ ಚಲಾಯಿಸುತ್ತಿದ್ದು, ನಿರ್ಲಕ್ಷ್ಯತನದ ಚಾಲನೆಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಿಪ್ಪರ್ ಡಿಕ್ಕಿ ಹೊಡೆದ ತೀವ್ರತೆಗೆ ವೆಂಕಟರಮಣ ಹೊಳ್ಳ ಅವರ ತಲೆ ಛಿದ್ರವಾಗಿತ್ತು. ಈ ಅಪಘಾತ ನಡೆದ ಬಳಿಕ ಟಿಪ್ಪರ್ ನಿಲ್ಲಿಸದೆ ಚಾಲಕ ಪರಾರಿಯಾಗಿದ್ದ. ಈ ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.