ಆರ್ಯನ್ ಜೈಲಿನಿಂದ ಬಿಡುಗಡೆ

ಮುಂಬೈ, ಅ.೩೦- ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್, ಸುಮಾರು ನಾಲ್ಕು ವಾರಗಳ ನಂತರ ಇಂದು ಮುಂಬೈ ಜೈಲಿನಿಂದ ಹೊರ ಬಂದಿದ್ದಾರೆ.
ಇಂದು ಬೆಳಿಗ್ಗೆ ಜೈಲಿನಿಂದ ಬಿಡುಗಡೆ ಮಾಡಲಾಗಿದ್ದು, ಪುತ್ರನನ್ನು ಕರೆದೊಯ್ಯಲು ಶಾರುಖ್ ಖಾನ್ ಅವರು ಜೈಲಿಗೆ ಆಗಮಿಸಿದ್ದರು.
ಮುಂಬೈ ಕರಾವಳಿಯ ಕ್ರೂಸ್ ಹಡಗಿನಲ್ಲಿ ಎನ್ ಸಿಬಿ ಅಧಿಕಾರಿಗಳಿಂದ ಬಂಧನಕ್ಕೊಳಗಾದ ಆರ್ಯನ್ ೨೨ ದಿನಗಳ ನಂತರ ಆರ್ಥರ್ ರೋಡ್ ಜೈಲಿನಿಂದ ಹೊರನಡೆದರು. ಜೈಲಿನಿಂದ ಬಿಡುಗಡೆಯಾದ ನಂತರ ಆರ್ಯನ್, ಶಾರುಖ್ ಬಾಂದ್ರಾದ ಮನೆ ಮನ್ನತ್ ತಲುಪಿದ್ದಾರೆ.
ಆರ್ಯನ್ ಖಾನ್ ಗೆ ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ನೀಡಿತ್ತು.ಆದರೆ, ಜಾಮೀನು ಪ್ರಕ್ರಿಯೆ ವಿಳಂಬವಾಗಿದ್ದರಿಂದ ಇನ್ನೂ ಎರಡು ರಾತ್ರಿ ಜೈಲಿನಲ್ಲಿ ಕಳೆಯುವಂತಾಯಿತು. ಶನಿವಾರ ಬೆಳಿಗ್ಗೆ ೧೧ ಗಂಟೆಯ ಸುಮಾರಿಗೆ ಆರ್ಥರ್ ರೋಡ್ ಜೈಲು ಅಧಿಕಾರಿಗಳು “ಜಾಮೀನು ಪೆಟ್ಟಿಗೆ” ಯಿಂದ ಜಾಮೀನು ಪತ್ರಗಳನ್ನು ಹೊರತೆಗೆದ ಬಿಡುಗಡೆಯ ಪ್ರಕ್ರಿಯೆಯನ್ನು ಆರಂಭಿಸಿದರು.
ಭಾರತದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಆರ್ಯನ್ ಖಾನ್ ಅವರ ಜಾಮೀನಿಗಾಗಿ ಮೂರು ದಿನಗಳ ಕಾಲ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಇನ್ನೂ, ಆರ್ಯನ್ ಖಾನ್ ಮತ್ತು ಸಹ ಆರೋಪಿಗಳಾದ ಅರ್ಬಾಜ್ ಮರ್ಚೆಂಟ್ ಮತ್ತು ಮುನ್‌ಮುನ್ ಧಮೇಚಾ ಅವರಿಗೆ ೧೪ ಷರತ್ತುಗಳನ್ನು ವಿಧಿಸಿ ಹೈಕೋರ್ಟ್ ಜಾಮೀನು ಮಂಜೂರು ಮಾಡಲಾಗಿದೆ.
ಇಬ್ಬರು ಶ್ಯೂರಿಟಿಗಳೊಂದಿಗೆ ತಲಾ ೧ ಲಕ್ಷ ರೂ.ಗಳ ವೈಯಕ್ತಿಕ ಬಾಂಡ್‌ನಲ್ಲಿ ಬಿಡುಗಡೆ ಮಾಡುವಂತೆ ಆದೇಶ ನೀಡಿತ್ತು. ಅಲ್ಲದೆ, ಹೈಕೋರ್ಟ್ ಜಾಮೀನು ನೀಡಿದ ಬಳಿಕ ಬಿಡುಗಡೆ ಪತ್ರಗಳು ಸಕಾಲದಲ್ಲಿ ತಲುಪದ ಕಾರಣ ಆರ್ಯನ್ ಖಾನ್ ಜೈಲಿನಲ್ಲಿ ಒಂದು ರಾತ್ರಿ ಹೆಚ್ಚು ಕಳೆಯಬೇಕಾಗಿತ್ತು.