ಆರ್‌ಬಿಐ ರೆಪೋ ದರ ಏರಿಕೆ ವಾಹನ, ಗೃಹ ಸಾಲ ಬಡ್ಡಿ ತುಟ್ಟಿ

ಮುಂಬೈ,ಆ.೫- ನಿರೀಕ್ಷೆಯಂತೆ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಮತ್ತೆ ೫೦ ಮೂಲಾಂಶಗಳನ್ನು ಹೆಚ್ಚಿಸಿದ್ದು, ಇದರಿಂದಾಗಿ ವಾಹನ ಸಾಲ ಮತ್ತು ಗೃಹ ಸಾಲದ ಮೇಲಿನ ಬಡ್ಡಿ ದರ ದುಬಾರಿಯಾಗಲಿದೆ. ಈ ದರ ತಕ್ಷಣದಿಂದಲೇ ಜಾರಿಗೆ ಬರಲಿದೆ.
ದೇಶದ ವಾಣಿಜ್ಯ ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಸಾಲದ ಬಡ್ಡಿ ದರವೇ ರೆಪೋ ದರ, ಆರ್‌ಬಿಐ ರೆಪೋ ದರ ಹೆಚ್ಚಳ ಮಾಡಿರುವುದರಿಂದ ಬ್ಯಾಂಕುಗಳು ಬಡ್ಡಿ ದರದಲ್ಲಿ ಹೆಚ್ಚಳ ಮಾಡಲಿದ್ದು, ಗೃಹ, ವಾಹನ ಹಾಗೂ ಇತರ ಸಾಲಗಳ ಮೇಲಿನ ಬಡ್ಡಿ ದರ ಏರಿಕೆಯಾಗಲಿದೆ.ವಾಣಿಜ್ಯ ರಾಜಧಾನಿ ಮುಂಬೈನಲ್ಲಿಂದು ಆರ್‌ಬಿಐ ಮುಖ್ಯಸ್ಥ ಶಕ್ತಿಕಾಂತ್‌ದಾಸ್ ಸುದ್ದಿಗೋಷ್ಠಿಯಲ್ಲಿ ಹಣಕಾಸು ನಿರ್ವಹಣಾ ಸಮಿತಿಯ ತೀರ್ಮಾನವನ್ನು ಪ್ರಕಟಿಸಿದರು.ಜಾಗತಿಕ ಮಟ್ಟದಲ್ಲಿ ಆರ್ಥಿಕ ಪರಿಸ್ಥಿತಿ ಸತತವಾಗಿ ಏರಿಳಿತವಾಗುತ್ತಿದ್ದು, ಹಣ ದುಬ್ಬರದ ಮೇಲೆ ಹೆಚ್ಚಿನ ಪರಿಣಾಮ ಬೀರಿದ್ದು, ಅಗತ್ಯ ವಸ್ತುಗಳ ದರ ಏರಿಕೆಯನ್ನು ನಿಯಂತ್ರಿಸುವ ದೃಷ್ಟಿಯಿಂದ ರೆಪೋ ದರ ಏರಿಸುವುದು ಅನಿವಾರ್ಯ ಎಂದು ಹೇಳಿದರು.
ಆರ್‌ಬಿಐ ಗೌರ್‍ನರ್ ಶಕ್ತಿಕಾಂತ್ ನೇತೃತ್ವದ ಹಣಕಾಸು ಸಮಿತಿಯ ಎಲ್ಲ ೬ ಮಂದಿ ಸದಸ್ಯರು ರೆಪೋ ದರ ಏರಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ.
ಆಗಸ್ಟ್-೨೦೧೯ರ ಮಟ್ಟದ ರೆಪೋ ದರ ಇದಾಗಿದ್ದು, ಕೋವಿಡ್ ಪಿಡುಗು ಕಾಣಿಸಿಕೊಳ್ಳುವ ಮೊದಲಿನ ಹಂತಕ್ಕೆ ರೆಪೋ ದರ ಮುಟ್ಟಿದೆ. ಸತತ ೩ನೇ ಬಾರಿಗೆ ರೆಪೋ ದರ ಹೆಚ್ಚಳ ಮಾಡಲಾಗಿದ್ದು, ಶೇ. ೫.೪ ರಷ್ಟು ತಲುಪಿದೆ. ಇದರಿಂದಾಗಿ ದೇಶಾದ್ಯಂತ ಎಲ್ಲ ಬ್ಯಾಂಕ್‌ಗಳಲ್ಲಿಯೂ ಬಡ್ಡಿ ದರಗಳು ದುಬಾರಿಯಾಗಲಿವೆ.ದೇಶದಲ್ಲಿ ಹಣ ದುಬ್ಬರ ಪ್ರಮಾಣ ಏರಿಕೆಯಾಗಿರುವುದರಿಂದ ಇಂತಹ ಕಠಿಣ ತೀರ್ಮಾನ ತೆಗೆದುಕೊಳ್ಳುವುದು
ಅನಿವಾರ್ಯವಾಗಬಹುದು ಎಂದು ಉದ್ಯಮ ವಲಯ ಮೊದಲೇ ಅಂದಾಜು ಮಾಡಿತ್ತು.ಸಾಂಕ್ರಾಮಿಕ ಕೋವಿಡ್ ಪಿಡುಗು ದೇಶಕ್ಕೆ ವ್ಯಾಪಿಸಿದ್ದರಿಂದ ಆರ್ಥಿಕ ಪರಿಸ್ಥಿತಿ ಕುಸಿತದ ಹಾದಿಯತ್ತ ಸಾಗಿತ್ತು. ಇದನ್ನು ತಡೆಗಟ್ಟಲು ಮಾರ್ಚ್-೨೦೨೦ರಲ್ಲಿ ಆರ್‌ಬಿಯ ರೆಪೋ ದರವನ್ನು ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಿ ಸುಲಭ ರೀತಿಯಲ್ಲಿ ಸಾಲ ಸಿಗುವಂತೆ ಮಾಡಿತ್ತು.
ಈಗ ದೇಶದಲ್ಲಿ ಕೋವಿಡ್‌ನಿಂದ ಚೇತರಿಸಿಕೊಂಡಿದ್ದು, ಆರ್ಥಿಕ ಪರಿಸ್ಥಿತಿ ಸಹಜಸ್ಥಿತಿಯತ್ತ ಸಾಗಿದೆ. ಆದರೆ, ರಷ್ಯಾ-ಉಕ್ರೇನ್ ಸಂಘರ್ಷ ಚೀನಾದಲ್ಲಿ ಆರ್ಥಿಕ ಸಂಕಷ್ಟ ಭಾರತದ ಮೇಲೂ ಗೋಚರವಾಗುತ್ತಿದ್ದು, ಹಣ ದುಬ್ಬರ ಹೆಚ್ಚಳವಾಗಿ, ಅಗತ್ಯ ವಸ್ತುಗಳ ದರ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆರ್‌ಬಿಐ ಹಣಕಾಸಿನ ಹರಿವನ್ನು ನಿರ್ಬಂಧಿಸುವ ಮೂಲಕ ಮಾರುಕಟ್ಟೆಯಲ್ಲಿ ನಗದು ಚಲಾವಣೆಗೆ ಕಡಿವಾಣ ಹಾಕಿದೆ.
ಮೇ ತಿಂಗಳಿನಲ್ಲಿ ಆರ್‌ಬಿಐ ತನ್ನ ವಿಶೇಷಾಧಿಕಾರ ಬಳಸಿ ದಿಢೀರನೆ ರೆಪೋ ದರ ಏರಿಕೆ ಮಾಡಿತ್ತು.
ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣ ದುಬ್ಬರ ಆರ್‌ಬಿಐನ ತನ್ನ ಮಾನದಂಡವನ್ನು ನಿಗದಿಪಡಿಸುವಾಗ ಜೂನ್‌ನಲ್ಲಿ ಶೇ. ೭.೦೧ ರಷ್ಟಿತ್ತು. ಈ ವರ್ಷ ಜನವರಿಯಿಂದ ಗ್ರಾಹಕ ಸೂಚ್ಯಂಕದ ಬೆಲೆ ಶೇ. ೬ಕ್ಕಿಂತ ಹೆಚ್ಚಿತ್ತು.ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣ ದುಬ್ಬರ ಸತತ ೧೫ ತಿಂಗಳ ಒಳಗೆ ಎರಡಂಕ್ಕಿಯಲ್ಲೇ ಮುಂದುವರೆದಿತ್ತು. ಇತ್ತೀಚಿನ ಆರ್‌ಬಿಐ ಕ್ರಮ ಬ್ಯಾಂಕ್ ಆಫ್ ಇಂಗ್ಲೆಂಡ್ ದರವನ್ನು ಶೇ. ೫೦ ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿರುವುದನ್ನು ಅನುಸರಿಸುತ್ತಿದ್ದು, ಇದು ೨೭ ವರ್ಷಗಳ ಅವಧಿಯಲ್ಲಿ ಅತಿ ದೊಡ್ಡ ಏರಿಕೆಯಾಗಿದೆ.