ಆರ್ಥಿಕ ಹೊರೆ ಇಳಿಕೆಗೆ ಐದು ಗ್ಯಾರಂಟಿ ಜಾರಿ

ಬೆಂಗಳೂರು,ಜೂ.೩:ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಸರ್ಕಾರ ೫ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.ಬೆಂಗಳೂರಿನಲ್ಲಿಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷವಾದ ಬಿಜೆಪಿ ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುವ ಮೊದಲು ಪ್ರಧಾನಿ ನರೇಂದ್ರಮೋದಿ ಅವರು ಹೇಳಿದಂತೆ ಜನರ ಖಾತೆಗೆ ೧೫ ಲಕ್ಷ ಹಾಕಲಿ, ವರ್ಷಕ್ಕೆ ೨ ಕೋಟಿ ಉದ್ಯೋಗ ನೀಡಿ ರೈತರ ಆದಾಯ ದ್ವಿಗುಣ ಮಾಡಿ, ನಂತರ ಟೀಕೆ ಮಾಡುವುದು ಸೂಕ್ತ ಎಂದು ವ್ಯಂಗ್ಯವಾಡಿದರು. ಸದ್ಯದಲ್ಲೇ ಕೇಂದ್ರ ಸರ್ಕಾರಕ್ಕೆ ಲೋಕಸಭಾ ಚುನಾವಣೆಯ ಅಗ್ನಿಪರೀಕ್ಷೆ ಎದುರಾಗುತ್ತದೆ. ಆ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಅವರು ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಬೇಕಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಾದ ಗೃಹಜ್ಯೋತಿ ಯೋಜನೆಯನ್ನು ಉಳ್ಳವರು ಬಿಟ್ಟುಕೊಡಲು ಅವಕಾಶ ಕಲ್ಪಿಸುತ್ತೇವೆ. ಯಾರಿಗಾದರೂ ಈ ಯೋಜನೆಯ ಫಲ ಬೇಡವಾದರೆ ಅವರು ಬಿಲ್ ಕಟ್ಟಬಹುದು, ಈಗಾಗಲೇ ಕೆಲ ಸರ್ಕಾರಿ ನೌಕರರು, ಅಧಿಕಾರಿಗಳು, ಮಾಧ್ಯಮ ಮುಖ್ಯಸ್ಥರು ತಮಗೆ ಪತ್ರ ಬರೆದಿದ್ದಾರೆ. ಕೆಲವರು ಖುದ್ದಾಗಿ ಈ ಯೋಜನೆಯನ್ನು ತ್ಯಜಿಸುವುದಾಗಿ ತಿಳಿಸಿದ್ದಾರೆ ಎಂದರು.ಯೋಜನೆಯನ್ನು ಬಳಸಿಕೊಳ್ಳುವುದು ಬಿಡುವುದು ಜನರಿಗೆ ಸೇರಿದ್ದು, ಹಾಗಾಗಿಯೇ ಅರ್ಜಿಯನ್ನು ಕರೆದಿದ್ದೇವೆ. ಕೇಂದ್ರ ಸರ್ಕಾರ ಅಡುಗೆ ಅನಿಲದ ಸಬ್ಸಿಡಿ ತ್ಯಜಿಸಲು ಕರೆ ನೀಡಿದಾಗ ಹಲವರು ಅದಕ್ಕೆ ಸ್ಪಂದಿಸಿದ್ದರು. ಅದೇ ರೀತಿ ಇಲ್ಲಿಯೂ ಯೋಜನೆಯನ್ನು ತ್ಯಜಿಸಲು ಅವಕಾಶವಿದೆ ಎಂದರು.
ಗೃಹಜ್ಯೋತಿಯ ಲಾಭ ಬಾಡಿಗೆ ಮನೆಯಲ್ಲಿರುವವರಿಗೂ ಸಿಗುತ್ತದೆ. ಬಾಡಿಗೆ ಮನೆಯಲ್ಲಿರುವವರು ಬಡವರಲ್ಲವೇ ಎಂದು ಪ್ರಶ್ನಿಸಿದ ಅವರು, ಬಾಡಿಗೆ ಮನೆಯಲ್ಲಾದರೂ ಇರಲಿ, ಸ್ವಂತ ಮನೆಯಲ್ಲಾದರೂ ಇರಲಿ ಗೃಹಜ್ಯೋತಿಯ ಲಾಭ ಸಿಗುತ್ತದೆ. ಆದರೆ, ಇಷ್ಟು ದಿನ ೧೦೦ ಯೂನಿಟ್ ಬಳಸುತ್ತಿದ್ದವರು. ಏಕಾಏಕಿ ೨೦೦ ಯೂನಿಟ್ ಬಳಸಲು ಅವಕಾಶವಿಲ್ಲ. ವಿದ್ಯುತ್ ದುರುಪಯೋಗ ತಡೆಯಲು ಸರಾಸರಿ ಬಳಕೆ ಅಂಶವನ್ನು ಅಳವಡಿಸಲಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್‌ನವರು ಹಣೆಗೆ ತುಪ್ಪ ಸವರುತ್ತಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಟೀಕೆಗೆ ನಾನು ಪ್ರತಿಕ್ರಿಯಿಸಲ್ಲ. ಕುಮಾರಣ್ಣ ದೊಡ್ಡವರು ಅವರಿಗೆ ಬಹಳ ಅನುಭವವಿದೆ. ನಾನು ನನ್ನ ಕರ್ತವ್ಯ ಮಾಡುತ್ತೇನೆ. ಅವರು ಅವರ ಕರ್ತವ್ಯ ಮಾಡಲಿ ಎಂದರು.