ಆರ್ಥಿಕ ಹಿಂಜರಿತ ವಿಶ್ವಬ್ಯಾಂಕ್ ಎಚ್ಚರಿಕೆ

ನ್ಯೂಯಾರ್ಕ್, ಸೆ.೧೬- ಆರ್ಥಿಕ ಸಮಸ್ಯೆಗೆ ಸಿಲುಕಿರುವ ಅಮೆರಿಕಾ ಸೇರಿದಂತೆ ಹಲವು ದೇಶಗಳು ಇದೀಗ ತಮ್ಮ ಬಡ್ಡಿದರವನ್ನು ಹೆಚ್ಚಿಸಿರುವುದು ವಿಶ್ವದಲ್ಲಿ ಹಣದುಬ್ಬರ ಪ್ರಮಾಣವನ್ನು ಆಕಾಶಕ್ಕೇರಿಸುವಂತೆ ಮಾಡಿದೆ. ಇದು ಮುಂದೆ ವಿಶ್ವದಲ್ಲಿ ಆರ್ಥಿಕ ಹಿಂಜರಿತ ಸೇರಿದಂತೆ ಹಲವು ಸಮಸ್ಯೆಗಳಿಗೆ ಹಾದಿ ಮಾಡಿಕೊಡಲಿದೆ ಎಂದು ವಿಶ್ವಬ್ಯಾಂಕ್ ಇದೀಗ ಎಚ್ಚರಿಕೆ ನೀಡಿದೆ.
ಕೇಂದ್ರೀಯ ಬ್ಯಾಂಕುಗಳು ಗಗನಕ್ಕೇರುತ್ತಿರುವ ಹಣದುಬ್ಬರ ದರಗಳನ್ನು ಕಡಿಮೆ ಮಾಡಲು ಸರಿಯಾಗಿ ಗಮನಹರಿಸುತ್ತಿರುವುದರಿಂದ ಜಾಗತಿಕ ಆರ್ಥಿಕ ಹಿಂಜರಿತದ ಬೆದರಿಕೆಯು ಬೆಳೆಯುತ್ತಿದೆ ಎಂದು ಎಚ್ಚರಿಕೆ ನೀಡಿರುವ ವಿಶ್ವಬ್ಯಾಂಕ್, ಏರುತ್ತಿರುವ ಬೆಲೆಗಳ ಹಿಂದಿನ ನಿರ್ಬಂಧಗಳನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಪೂರೈಕೆಯನ್ನು ಹೆಚ್ಚಿಸಲು ಸರ್ಕಾರಗಳು ಹೊಸ ನೀತಿಗಳೊಂದಿಗೆ ಹೆಜ್ಜೆ ಹಾಕುವಂತೆ ಕೂಡ ನಿರ್ದೇಶನ ನೀಡಿದೆ. ಸಾಂಕ್ರಾಮಿಕ ರೋಗದಿಂದ ದೇಶಗಳು ಹೊರಬರುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಬೇಡಿಕೆಗೆ ಅನುಗುಣವಾಗಿ ಪೂರೈಕೆಯ ನಿರ್ಬಂಧಗಳ ಕಾರಣದಿಂದಾಗಿ ವಿಶ್ವದಾದ್ಯಂತ ಹಣದುಬ್ಬರ ಪ್ರಮಾಣ ದಶಕಗಳಲ್ಲಿ ಅತ್ಯಂತ ವೇಗದಲ್ಲಿ ಏರುತ್ತಿದೆ. ಅದರಲ್ಲೂ ಮುಖ್ಯವಾಗಿ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಮತ್ತು ಚೀನಾದಲ್ಲಿ ಕೋವಿಡ್ ಲಾಕ್‌ಡೌನ್‌ಗಳಿಂದ ಈ ವರ್ಷ ಉಲ್ಬಣಗೊಂಡಿದೆ. ಅಲ್ಲದೆ ಏರುಗತಿಯಲ್ಲಿ ಸಾಗುತ್ತಿರುವ ಬೇಡಿಕೆಯನ್ನು ಕುಗ್ಗಿಸುವ ಹಾಗೂ ಹಣದುಬ್ಬರ ತಗ್ಗಿಸುವ ಸಲುವಾಗಿ ಹಲವು ಬ್ಯಾಂಕ್‌ಗಳು ಇದೀಗ ಎರವಲು ವೆಚ್ಚವನ್ನು ಏರಿಸಿದೆ. ಆದರೆ ಈ ರೀತಿಯ ಕ್ರಮಗಳಿಂದ ಯಾವುದೇ ಪ್ರಯೋಜನಗಳು ಇಲ್ಲ ಎನ್ನಲಾಗಿದೆ. ವಿಶ್ವ ಆರ್ಥಿಕ ತಜ್ಞರ ಪ್ರಕಾರ, ಹೆಚ್ಚಿನ ಬೆಲೆಗಳನ್ನು ನಿಯಂತ್ರಣಕ್ಕೆ ತರಲು ಕ್ರಮಗಳು ಇದು ಸಾಕಾಗುವುದಿಲ್ಲ. ಅಲ್ಲದೆ ಇದಕ್ಕೆ ಹೆಚ್ಚಿನ ಬಡ್ಡಿದರ ಹೆಚ್ಚಳದ ಅಗತ್ಯವಿರುತ್ತದೆ ಎಂದು ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ ಪೂರೈಕೆ ಹಾಗೂ ಬೇಡಿಕೆ ನಡುವಿನ ಅಸಮರ್ಪಕತೆಯ ಹಿನ್ನೆಲೆಯಲ್ಲಿ ವಿಶ್ವದಲ್ಲಿ ಹೊಸ ಸಮಸ್ಯೆ ಬಿಗಡಾಯಿಸಿದೆ.