ಆರ್ಥಿಕ ಸ್ಥಿತಿ ದಿವಾಳಿಯಾಗಲು ಬಿಡಲ್ಲ

ಬಿಜೆಪಿ ವಿರುದ್ಧ ವಾಗ್ದಾಳಿ


(ಸಂಜೆವಾಣಿ ಪ್ರತಿನಿಧಿಯಿಂದ)


ಬೆಂಗಳೂರು, ಜು. ೧೪- ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ. ಆದರೆ, ಯಾವುದೇ ಕಾರಣಕ್ಕೂ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ದಿವಾಳಿಯಾಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಣ ತೊಟ್ಟಿದ್ದಾರೆ.
ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡಿದರೆ ಸರ್ಕಾರ ದಿವಾಳಿಯಾಗಲಿದೆ ಎಂಬ ಪ್ರಧಾನಮಂತ್ರಿ ನರೇಂದ್ರಮೋದಿ ಪ್ರತಿಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡೇ ತಿಂಗಳಲ್ಲಿ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ ಜಾರಿಯಾಗಿದ್ದು, ಮುಂದಿನ ತಿಂಗಳು ಗೃಹಲಕ್ಷ್ಮಿ ಯೋಜನೆ ಜಾರಿಗೆ ಬರಲಿದೆ. ಹಂತ ಹಂತವಾಗಿ ಎಲ್ಲ ಗ್ಯಾರಂಟಿಗಳು ಅನುಷ್ಠಾನ ಮಾಡುತ್ತೇವೆ. ರಾಜ್ಯದ ಜನರಿಗೆ ಕೊಟ್ಟ ಭರವಸೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಮತ್ತೊಮ್ಮೆ ವಾಗ್ದಾನ ಮಾಡಿದ್ದಾರೆ.
ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ಮೇಲೆ ನಡೆದ ಚರ್ಚೆಗೆ ವಿಧಾನ ಪರಿಷತ್ತಿನಲ್ಲಿಂದು ಸುದೀರ್ಘ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ೫ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರುತ್ತೇವೆ. ವಿರೋಧ ಪಕ್ಷಗಳಿಗೆ ಯಾವುದೇ ಅನುಮಾನ ಬೇಡ. ಗ್ಯಾರಂಟಿ ಯೋಜನೆ ಜಾರಿ ಮಾಡುವುದರಿಂದ ರಾಜ್ಯ ದಿವಾಳಿಯಾಗುತ್ತದೆ ಎಂದವರೇ ಅನುಷ್ಠಾನ ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯವನ್ನು ದಿವಾಳಿಯಾಗಲು ಬಿಡದೆ ಆರ್ಥಿಕವಾಗಿ ಸದೃಢವನ್ನಾಗಿ ಮಾಡಲಾಗುವುದು ಎಂದು ಹೇಳಿದರು.
ಯಾವುದೇ ಯೋಜನೆಗಳನ್ನು ಘೋಷಿಸುವ ಮುನ್ನ ಅದರ ಸಾಧಕ-ಬಾಧಕಗಳು, ಸಂಪನ್ಮೂಲಗಳ ಕ್ರೂಢೀಕರಣ ಸೇರಿದಂತೆ ಮತ್ತಿತರ ವಿಷಯಗಳನ್ನು ಚರ್ಚಿಸಿಯೇ ಯೋಜನೆಯನ್ನು ಪ್ರಕಟಿಸುವುದು. ಹೀಗಾಗಿ ೫ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದೇವೆ. ಅವುಗಳನ್ನು ಜಾರಿ ಮಾಡುತ್ತೇವೆ. ಇದರಲ್ಲಿ ಯಾರಿಗೂ ಅನುಮಾನ, ಅಪನಂಬಿಕೆ ಬೇಡ ಎಂದು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರದ ಬೆಲೆ ಏರಿಕೆ, ದುರಾಡಳಿತ, ಭ್ರಷ್ಟಾಚಾರ ಸೇರಿದಂತೆ ವಿವಿಧ ಕಾರಣಗಳಿಂದ ರಾಜ್ಯದ ಜನರು ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ. ತಾವು ಜನರಿಗೆ ಭರವಸೆ ನೀಡಿರುವ ಯೋಜನೆಗಳನ್ನು ಜಾರಿ ಮಾಡುತ್ತೇವೆ. ಇದು ನಮ್ಮ ಬದ್ಧತೆ ಎಂದು ಅವರು ತಿಳಿಸಿದರು.
ಹೆಣ್ಣು ಮಕ್ಕಳು ಸಂತೃಪ್ತ
ಗ್ಯಾರಂಟಿ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಸೇರಿದಂತೆ ವಿವಿಧ ಗ್ಯಾರಂಟಿ ಯೋಜನೆಗಳಿಂದ ಹೆಣ್ಣುಮಕ್ಕಳು ಸಂತೃಪ್ತರಾಗಿದ್ದಾರೆ. ಪ್ರತಿ ತಿಂಗಳು ತಲಾ ಒಬ್ಬರಿಗೆ ಈ ಗ್ಯಾರಂಟಿ ಯೋಜನೆಗಳಿಂದ ೫ ಸಾವಿರ ರೂಪಾಯಿ ದೊರೆಯಲಿದೆ. ಇದು ಮಹಿಳೆಯರಿಗೆ ಹಣ ನೀಡಿದಂತೆ ಅಲ್ಲವೇ ಎಂದು ವಿರೋಧ ಪಕ್ಷಗಳ್ನು ಪ್ರಶ್ನಿಸಿದರು.
ಶಕ್ತಿ ಯೋಜನೆ ಜಾರಿಯಿಂದ ರಾಜ್ಯದ ದೇವಾಲಯಗಳು, ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿವೆ. ನಿನ್ನೆಯಷ್ಟೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಪತ್ರ ಬರೆದು ಮೆಚ್ಚುಗೆ ಸೂಚಿಸಿದ್ದಾರೆ. ರಾಜ್ಯದ ಮಹಿಳೆಯರು ಸಂತೃಪ್ತರಾಗಿದ್ದಾರೆ. ನಿಮ್ಮ ಹೆಸರಲ್ಲಿ (ಮುಖ್ಯಮಂತ್ರಿ ಹೆಸರಲ್ಲಿ) ದೇವರಿಗೆ ಪೂಜೆ ಸಲ್ಲಿಸುತ್ತಿದ್ದಾರೆ ಎನ್ನುವುದನ್ನು ನನ್ನ ಗಮನಕ್ಕೆ ತಂದಿದ್ದಾರೆ. ನನ್ನ ಹೆಸರಲ್ಲಿ ಪೂಜೆ ಸಲ್ಲಿಸುವ ಎಲ್ಲ ಮಹಿಳೆಯರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಅವರು ಹೇಳಿದರು.

ಬಾಕ್ಸ್.

ಬಿಜೆಪಿ ಅವನತಿ ಆರಂಭ..
ದೇಶದಲ್ಲಿ ಬಿಜೆಪಿ ಪಕ್ಷದ ಅವನತಿ ಕರ್ನಾಟಕದಿಂದಲೇ ಆರಂಭವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್ತಿನಲ್ಲಿಂದು ಕಟಕಿ ಆಡಿದರು.
ಈ ಹಿಂದೆ ಬಿಜೆಪಿ ೨ ಸ್ಥಾನ ಪಡೆದಿತ್ತು. ಈಗ ೩೦ಕ್ಕೂ ಹೆಚ್ಚೂ ಸ್ಥಾನ ಪಡೆದಿದ್ದಾರೆ. ಇದು ಕಾಲಚಕ್ರ, ತಿರುಗಲೇ ಬೇಕು. ಮತ್ತೆ ಎಲ್ಲಿದ್ದರೋ ಅಲ್ಲಿಗೆ ತೆರಳುತ್ತೀರಾ, ಅದಕ್ಕೆ ರಾಜ್ಯದಿಂದಲೇ ಮುನ್ನುಡಿ ಬರೆಯಲಾಗಿದೆ ಎಂದು ಹೇಳಿದರು.
ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಹೇಳಿದ ರೀತಿ ನಾವು ಬಿಜೆಪಿ ಮುಕ್ತ ಭಾರತ ಅಥವಾ ಕರ್ನಾಟಕ ಮಾಡುತ್ತೇವೆ ಎಂದು ಹೇಳುವುದಿಲ್ಲ. ಪ್ರತಿಪಕ್ಷವಾಗಿ ನೀವು ಇರಬೇಕು. ಆದರೆ ಎಂದೆಂದಿಗೂ ಅಧಿಕಾರಕ್ಕೆ ಬರಬಾರದು. ಪ್ರತಿಪಕ್ಷದಲ್ಲೇ ಇರಬೇಕು ಎನ್ನುವುದು ನಮ್ಮ ಆಶಯ ಎಂದು ಅವರು ಹೇಳಿದರು.
೧೯೮೩ ರಿಂದ ವಿಧಾನಸಭೆಯಲ್ಲಿದ್ದೇನೆ. ಅಲ್ಲಿಂದ ಇಲ್ಲಿಯ ತನಕ ಎರಡೂ ಸದನಗಳಲ್ಲಿ ವಿರೋಧ ಪಕ್ಷದ ನಾಯಕರಿಲ್ಲದೆ ಕಲಾಪ ನಡೆದಿರಲಿಲ್ಲ. ಈ ಬಾರಿ ಕಲಾಪ ಆರಂಭವಾಗಿ ೧೨ ದಿನವಾದರೂ ಪ್ರತಿಪಕ್ಷದ ನಾಯಕನ ಆಯ್ಕೆಯಾಗಿಲ್ಲ. ಇದನ್ನೆಲ್ಲ ನೋಡಿದರೆ ರಾಜಕೀಯ ದಿವಾಳಿಯಾಗುವ ಮುನ್ಸೂಚನೆ ಬಿಜೆಪಿಯದ್ದು ಎಂದು ಹೇಳಿದರು.
ಹಿಟ್ಲರ್ ಸಂಸ್ಕೃತಿ ಬೇಡ
ಹಿಟ್ಲರ್ ತಾನೇ ಸರ್ವಶ್ರೇಷ್ಠ ಎಂದು ಹೇಳಿಕೊಂಡು ಯಹೂದಿಗಳನ್ನು ಕಡೆಗಣಿಸಿದ. ಕಡೆಗೆ ಆತನೇ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂತು. ಬಿಜೆಪಿಯವರಿಗೆ ಹಿಟ್ಲರ್ ಪರಿಸ್ಥಿತಿ ಬೇಡ. ನಾವೇ ಶ್ರೇಷ್ಠ, ನಮ್ಮ ಧರ್ಮ ಶ್ರೇಷ್ಠ ಎನ್ನುವ ಮನಸ್ಥಿತಿಯಿಂದ ಹೊರ ಬನ್ನಿ ಎಂದು ಸಲಹೆ ನೀಡಿದರು.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡುವ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಆಗಾಗ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪವೂ ನಡೆಯಿತು.