ಆರ್ಥಿಕ ಸದೃಢತೆಗೆ ನರೇಗಾ ಯೋಜನೆ ಸಹಕಾರಿ: ಸತೀಶ್

ರಾಯಚೂರು,ಜ.೧೫-ಮಹಿಳೆ ಹಾಗೂ ಪುರುಷರಿಗೆ ನರೇಗಾ ಕಾಮಗಾರಿಗಳಲ್ಲಿ ತೊಡಗುವುದರಿಂದ ಆರ್ಥಿಕವಾಗಿ ಸದೃಢರಾಗಬಹುದು ಎಂದು ಮಸ್ಕಿ ತಾಪಂ ಐಇಸಿ ಸಂಯೋಜಕ ಜಿ.ಸತೀಶ್ ಸಲಹೆ ನೀಡಿದರು.
ಅವರು ಜ.೧೩ರ ಗುರುವಾರ ದಂದು ಜಿಲ್ಲೆಯ ಮಸ್ಕಿ ತಾಲೂಕಿನ ತಲೇಖಾನ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೋಜ್ಗಾರ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾಗಿರುವ ನರೇಗಾದಡಿ ಪ್ರತಿ ಜಾಬ್ಕಾರ್ಡ್ಗೆ ನೂರು ದಿನಗಳ ಕಾಲ ಕೆಲಸ ನೀಡಲಾಗುತ್ತಿದೆ. ಮಹಿಳೆ, ಪುರುಷರಿಗೆ ಸಾಮಗ್ರಿ ವೆಚ್ಚ ಸೇರಿ ೨೯೯ ರೂ. ಸಮಾನ ವೇತನ ನೀಡಲಾಗುತ್ತಿದೆ. ಕಾಮಗಾರಿ ಸ್ಥಳದಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಕೃಷಿ ಹೊಂಡ ನಿರ್ಮಾಣ: ಮೆದಕಿನಾಳ ಗ್ರಾಮದ ಕೃಷಿ ಹೊಂಡ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ರೋಜ್ಗಾರ್ ದಿನ ಆಚರಿಸಲಾಯಿತು. ಬಿಎಫ್ಟಿ ಲಾಲ್ ಸಾಬ್ ಇತರರಿದ್ದರು. ಮನೆ ಮೆನೆಗೆ ಭೇಟಿ ನೀಡಿ, ಜಾಬ್ ಕಾರ್ಡ್ಗಳನ್ನು ಪರಿಶೀಲಿಸಲಾಯಿತು.
ಸಮುದಾಯ ಕಾಮಗಾರಿಗಳ ಜತೆಗೆ ವೈಯಕ್ತಿಕ ಕಾಮಗಾರಿಯಡಿ ದನದ ಶೆಡ್, ಕುರಿ ಶೆಡ್ ನಿರ್ಮಿಸಿಕೊಳ್ಳಬಹುದು. ಪೇರಲ, ದಾಳಿಂಬೆ, ನಿಂಬು, ಗುಲಾಬಿ ಬೆಳೆಯಬಹುದು. ಯುವಕರು ಕೆಲಸ ಆರಿಸಿ ಮಹಾ ನಗರಗಳಿಗೆ ಗುಳೆ ಹೋಗುವ ಬದಲು ನರೇಗಾದಡಿ ಪ್ರೋತ್ಸಾಹ ಧನ ಪಡೆದು, ತೋಟಗಾರಿಕೆ ಬೆಳೆ ಬೆಳೆಯುವುದರಿಂದ ಲಾಭ ಹೊಂದಬಹುದಲ್ಲದೇ, ಸ್ವಂತ ಊರಿನಲ್ಲಿಯೇ ಜೀವನ ಸಾಗಿಸಬಹುದು ಎಂದರು.
ತಲೇಖಾನ ಗ್ರಾಪಂ ಕಂಪ್ಯೂಟರ್ ನಿರ್ವಾಹಕ ಶರಣಬಸವ ಇತರರಿದ್ದರು.