ಆರ್ಥಿಕ ಸಂಕಷ್ಟದಲ್ಲಿಯೂ ಸರ್ಕಾರದಿಂದ ಉತ್ತಮ ಕಾರ್ಯ

ಗುಳೇದಗುಡ್ಡ ಮೇ.21- ಕೊರೊನಾ ಮಹಾಮಾರಿ ಕಟ್ಟಿಹಾಕಲು ಲಾಕ್‍ಡೌನ್ ಜಾರಿಗೊಳಿಸಿದ ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವ ಶ್ರಮಿಕ ವರ್ಗಕ್ಕೆ 1250 ಕೋಟಿ ರೂಗಳ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ರಾಜ್ಯದ ಆರ್ಥಿಕತೆಯ ಸಂಕಷ್ಟದ ಸಮಯದಲ್ಲೂ ಬಿಜೆಪಿ ಸರ್ಕಾರ ಶಕ್ತಿಮೀರಿ ಕೆಲಸ ಮಾಡಿದೆ ಎಂದು ಪಟ್ಟಣದ ಮಾಜಿ ಶಾಸಕ ರಾಜಶೇಖರ ಶೀಲವಂತ ಸರ್ಕಾರದ ಕಾರ್ಯವನ್ನು ಸ್ವಾಗತಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ರಾಜಶೇಖರ ಶೀಲವಂತ ಅವರು, ರಾಜ್ಯದಲ್ಲಿ ಬೀಕರವಾದ ಕೋವಿಡ್ 2ನೇ ಅಲೆಯಿಂದ ಜನತೆಗೆ ತೊಂದರೆಯಾಗಿದೆ ನಿಜ, ಈ ಸಂದರ್ಭದಲ್ಲಿ ಜನತೆಗೆ ಆರ್ಥಿಕ ಪ್ಯಾಕೇಜ್‍ನ ಅವಶ್ಯಕತೆ ಜನರಿಗೆ ಬೇಕಾಗಿತ್ತು. ಇದನ್ನು ಅರಿತ ಮುಖ್ಯಮಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸರ್ಕಾರದಿಂದ ಸಹಾಯಧನವನ್ನು ಕೊಡಲಿಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ. ತರಕಾರಿ ನಷ್ಟಕ್ಕೆ ಪ್ರತಿ ಹೆಕ್ಟೇರ್ 10 ಸಾವಿರ, ಹಣ್ಣು ತರಕಾರಿ ಬೆಳೆಗೆ ಒಂದು ಹೆಕ್ಟೇರ್‍ಗೆ ಕನಿಷ್ಠ 10 ಸಾವಿರ ಸಹಾಯಧನ, ಆಟೋ, ಕ್ಯಾಬ್ ಚಾಲಕ 3 ಸಾವಿರ, ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ, ಅಗಸ, ಚಮ್ಮಾರ, ಕಮ್ಮಾರ ಸೇರಿದಂತೆ ಅಸಂಘಟಿತರಿಗೆ 2 ಸಾವಿರ, ರಸ್ತೆಬದಿ ವ್ಯಾಪಾರಿಗಳಿಗೆ 2 ಸಾವಿರ, ಕಲಾವಿದರು, ಕಲಾತಂಡಕ್ಕೆ 3 ಸಾವಿರ ಹಾಗೂ ಸಾಲ ಮರುಪಾವತಿಗೆ 3 ತಿಂಗಳ ಅವಕಾಶ ಇದ್ದು, 3 ತಿಂಗಳ ಬಡ್ಡಿ ಸರ್ಕಾರವೇ ಭರಿಸಲಿದೆ ಇದಕ್ಕಾಗಿ ಒಟ್ಟು 1,250 ಕೋಟಿ ಹಣವನ್ನು ಮೀಸಲಿಟ್ಟ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಕ್ತಿ ಮೀರಿ ಕೆಲಸ ಮಾಡುವುದರ ಮೂಲಕ ಶ್ರಮಿಕ ವರ್ಗದವರಿಗೆ ನೆರವಾಗಿದ್ದಾರೆ. ಕೇಂದ್ರ ಸರ್ಕಾರ ಕೂಡಾ ಸಾಕಷ್ಟು ಪ್ರಮಾಣದಲ್ಲಿ ರಾಜ್ಯ ಸರ್ಕಾರಕ್ಕೆ ನೆರವಿಗೆ ಬಂದಿದ್ದು ಕೂಡಾ ಗಮನಾರ್ಹ.
ಸರ್ಕಾರ ಈಗ ಶ್ರಮಿಕ ವರ್ಗದ ಜನತೆಗೆ ಕೊಟ್ಟ ಪ್ಯಾಕೇಜ್‍ನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಾರ್ವಜನಿಕರು ಎಚ್ಚರಿಕೆ ಹೆಜ್ಜೆಯಿಟ್ಟು ವಿನಾಕಾರಣ ಮನೆಬಿಟ್ಟು ಹೊರಗಡೆ ಬರಬಾರದು, ಸಾಮಾಜಿಕ ಅಂತರದೊಂದಿಗೆ ಮುಖಗವಸು ಹಾಕಿಕೊಳ್ಳಬೇಕು ಎಂದು ನಾಗರಿಕರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.
ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ ಮಾರ್ಕೆಟ್‍ಗೆ ಬಂದಾಗ ಇದರ ಬಗ್ಗೆ ಕಾಂಗ್ರೆಸ್ ಪಕ್ಷದವರು ನಮ್ಮ ಸರ್ಕಾರ ವಿರುದ್ದವಾಗಿ ಪ್ರಚಾರ ಮಾಡಿದರು. ಅದು ಸರಿ ಇಲ್ಲ, ಹಾಗೆ ಹೀಗೆ ಎಂದು ಹೇಳಿರುವ ಕಾಂಗ್ರೆಸ ಮುಖಂಡರು, ಇವತ್ತಿನ ಸಂದರ್ಭದಲ್ಲಿ ಲಸಿಕೆ ಸಿಗುತ್ತಿಲ್ಲ ಎಂದು ಹೇಳುತ್ತಿರುವುದು ಅಕ್ಷಮ್ಯವಾಗಿದೆ. ಕಾಂಗ್ರೆಸ್ ಪಕ್ಷದವರು ಕೊರೊನಾ ಇಂತಹ ವಿಷಮ ಪರಿಸ್ಥಿತಿ ಸಮಯದಲ್ಲಿ ರಾಜಕೀಯ ಮಾಡಬಾರದು ಎಂದು ವಿರೋಧ ಪಕ್ಷದವರಿಗೆ ಎಚ್ಚರಿಕೆಯನ್ನು ನೀಡುತ್ತೇನೆ ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ತಿಳಿಸಿದ್ದಾರೆ.