ಆರ್ಥಿಕ ಶಿಸ್ತಿಗೆ ಮ್ಯಾನುಯಲ್ ಪದ್ಧತಿ

ಬೆಂಗಳೂರು, ಮಾ. ೨೭- ಬಿಬಿಎಂಪಿಯಲ್ಲಿ ಆರ್ಥಿಕ ಶಿಸ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಇದೇ ಮೊದಲ ಬಾರಿಗೆ ಮುನಿಸಿಪಲ್ ಅಕೌಂಟಿಂಗೆ ಮ್ಯಾನುಯಲ್ ಪದ್ಧತಿ ಅಳವಡಿಸಲು ತೀರ್ಮಾನಿಸಲಾಗಿದೆ.
ಇಂದು ಮಂಡಿಸಲಾಗಿರುವ ಮುಂಗಡ ಪತ್ರದಲ್ಲಿ ಪಾಲಿಕೆಗೆ ಸಂಪನ್ಮೂಲ ಕ್ರೋಢಿಕರಣಕ್ಕೂ ಒತ್ತು ನೀಡಲಾಗಿದ್ದು ಎಲ್ಲ ರೀತಿಯ ಕಾಮಗಾರಿಗಳನ್ನು ತಾಂತ್ರಿಕ ಜಾಗೃತ ಕೋಶದ ಮೂಲಕ ಸ್ಥಳ ಪರಿಶೀಲನೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ.
ಪಾಲಿಕೆಯಲ್ಲಿ ಆಂತರಿಕ ಕೋಶ ಇಲ್ಲದೆ ವಾರ್ಷಿಕ ಲೆಕ್ಕಾಪರಿಶೋಧನೆಯಲ್ಲಿ ಸಾಕಷ್ಟು ಆಕ್ಷೇಪಣೆಗಳು ಬಂದಿರುವ ಹಿನ್ನೆಲೆಯಲ್ಲಿ ನೂತನವಾಗಿ ಆಂತರಿಕ ಲೆಕ್ಕಪರಿಶೋಧನಾ ವಿಭಾಗ ಸೃಷ್ಟಿಸಲಾಗುತ್ತಿದೆ.
ಸಿಬ್ಬಂದಿಗಳಿಗೆ ಮಹಾ ಲೆಕ್ಕಪಾಲಕರು ಕರ್ನಾಟಕ ಕಛೇರಿ ಸಿಬ್ಬಂದಿಯಿಂದ ತರಬೇತಿ ನೀಡಲಾಗುವುದು ಎಂದು ಹಣಕಾಸು ಆಯುಕ್ತೆ ತುಳಿಸಿ ಮೈದಿನಿ ಬಜೆಟ್ ಭಾಷಣದಲ್ಲಿ ಪ್ರಕಟಿಸಿದ್ದಾರೆ.
ಪಾಲಿಕೆಯಿಂದ ಕೈಗೊಳ್ಳಲಾಗಿರುವ ೧೦ ಸಾವಿರ ಕೋಟಿ ರೂ. ಕಾಮಗಾರಿ ವಿವರಗಳನ್ನು ಸಾರ್ವಜನಿಕರ ಮಾಹಿತಿ ಪ್ರಕಟಿಸಲಾಗಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಮಾರುಕಟ್ಟೆ ಕಟ್ಟಡ ಬಾಡಿಗೆ ವಸೂಲಿಗೆ ಕ್ರಮ, ಬಾಡಿಗೆ ಹೆಚ್ಚಿಸುವ ಪ್ರಸ್ತಾವನೆ, ಕಾನೂನು ವ್ಯಾಪ್ತಿಗೆ ಒಳಪಟ್ಟಿರುವ ಬಾಡಿಗೆ ಪರಿಸ್ಕರಣೆಗೆ ಬಾಡಿಗೆದಾರರ ಜೊತೆ ಮಧ್ಯಸ್ಥಿಕೆ ವಹಿಸಲು ಯೋಜನೆಯೊಂದನ್ನು ಜಾರಿಗೆ ತರಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ಕಟ್ಟಡ ಪರವಾನಿಗೆಯ ವಾಸ ದೃಢೀಕರಣ ಪತ್ರವನ್ನು ಸರಳಗೊಳಿಸಲು ಮುಂದಾಗಿದ್ದು, ಒಂದೇ ಅರ್ಜಿ ಸಲ್ಲಿಸಿ, ಏಕೀಕೃತ ತಂತ್ರಾಂಶ ಬಳಸಲು ನಿರ್ಧರಿಸಲಾಗಿದೆ.