ಆರ್ಥಿಕ ಪ್ಯಾಕೇಜ್ ಅಜಯ್ ಸುಳಿವು

ನವದೆಹಲಿ, ನ. ೨- ಕೊರೊನಾ ಸೋಂಕು ಕಾಣಿಸಿಕೊಂಡ ನಂತರ, ಹೆಚ್ಚು – ಕಡಿಮೆ ಒಂದು ವರ್ಷದ ಬಳಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಳೆದ ೨ ತಿಂಗಳುಗಳಿಂದ ಲಕ್ಷ ಕೋಟಿಗೂ ಅಧಿಕ ಸಂಗ್ರಹವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಆರ್ಥಿಕ ಪ್ಯಾಕೇಜ್ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ
ಇತ್ತೀಚಿನ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಗೆ ಸಿಲುಕಿದ ದೇಶದ ಜನರು ಮತ್ತು ಉದ್ಯಮಗಳಿಗೆ ಪರಿಹಾರದ ಪ್ಯಾಕೇಜ್ ನೀಡಲು ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಚಿಂತಿಸುತ್ತಿದೆ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಸುಳಿವು ನೀಡಿದ್ದಾರೆ.
ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದು, ನಿಗದಿತದ ಗಡುವಿನೊಳಗೆ ಪರಿಹಾರದ ಪ್ಯಾಕೇಜ್ ಅನ್ನು ತಲುಪಿಸಲು ಉದ್ದೇಶ ಹೊಂದಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.
ಆರ್ಥಿಕ ಚೇತರಿಗೆ ಸಂಬಂಧ ಕೈಗಾರಿಕೆ, ವಿವಿಧ ವ್ಯಾಪಾರ ವಹಿವಾಟು ಸಂಘಟನೆಗಳು, ವಿವಿಧ ಸಚಿವಾಲಯಗಳು ಸೇರಿದಂತೆ, ಹಲವರಿಂದ ಸಲಹೆ – ಸೂಚನೆ ಪಡೆಯಲಾಗಿದೆ.
ಅಗತ್ಯ ಸಂದರ್ಭದಲ್ಲಿ ಈ ಸಂಬಂಧ ಕೇಂದ್ರ ಸರ್ಕಾರ, ಪರಿಹಾರ ಪ್ಯಾಕೇಜ್ ಪ್ರಕಟಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಲಾಕ್ ಡೌನ್ ನಿಯಮಗಳನ್ನು ತೆರವುಗೊಳಿಸಿ, ಹಂತಹಂತವಾಗಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಿರುವ ಹಿನ್ನೆಲೆಯಲ್ಲಿ ದೇಶದ ಅರ್ಥವ್ಯವಸ್ಥೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಸೋಂಕಿನಿಂದಾಗಿ ತತ್ತರಿಸಿರುವ ವಿವಿಧ ವಲಯಗಳನ್ನು ಮೇಲೆತ್ತುವ ಉದ್ದೇಶದಿಂದ ಆರ್ಥಿಕ ಪ್ಯಾಕೇಜ್ ಪ್ರಕಟಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದೇಶದ ಆರ್ಥಿಕತೆ ಚೇತರಿಕೆಯತ್ತ ಸಾಗುತ್ತಿದೆ. ಇದರಿಂದ ಸುಸ್ಥಿರ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

೧,೦೫,೧೫೫ ಕೋಟಿ ಸಂಗ್ರಹ
ಅಕ್ಟೋಬರ್ ತಿಂಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ೧,೦೫,೧೫೫ ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷ ಅಕ್ಟೋಬರ್ ಗೆ ಹೋಲಿಸಿದರೆ, ಈ ವರ್ಷ ಶೇ. ೧೦ ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಜಿಎಸ್ ಟಿ ಸಂಗ್ರಹವಾಗಿದೆ.
ಸೆಪ್ಟೆಂಬರ್ ತಿಂಗಳಲ್ಲಿ ೯೫,೪೮೦ ಕೋಟಿ ರೂ. ಜಿಎಸ್ ಟಿ ಸಂಗ್ರಹವಾಗಿತ್ತು. ಕೋವಿಡ್ – ೧೯ ಸೋಂಕಿನ ನಂತರ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ಜಿಎಸ್ ಟಿ ಸಂಗ್ರಹ ತಿಂಗಳಿನಿಂದ ತಿಂಗಳಿಗೆ ಹೆಚ್ಚಾಗುತ್ತಿದೆ.
ಇದೇ ರೀತಿ ಮುಂದಿನ ೫ ತಿಂಗಳು ಜಿಎಸ್ ಟಿ ಸಂಗ್ರಹ ಮುಂದುವರೆದರೆ, ಮಾರ್ಚ್‌ನಿಂದ ಎದುರಾದ ಜಿಎಸ್ ಟಿ ಕೊರತೆಯನ್ನು ಸರಿದೂಗಿಸಲು ಸಾಧ್ಯವಾಗಲಿಕೆ ಎನ್ನುವ ನಿರೀಕ್ಷೆಯಲ್ಲಿ ಹಣಕಾಸು ಸಚಿವಾಲಯ ವಿಶ್ವಾಸ ಹೊಂದಿದೆ.