ಆರ್ಥಿಕ ಪುನಶ್ಚೇತನಕ್ಕೆ ದೃಢ ನಿಲುವು:ಸಿಎಂ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೭-ರಾಜ್ಯದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ದೃಢ ನಿಲುವು ಕೈಗೊಳ್ಳಲು ಹಿಂಜರಿಯುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜನರ ಆಶೋತ್ತರಗಳನ್ನು ಈಡೇರಿಸಲು ಕಂಕಣಬದ್ಧರಾಗಿರುವುದಾಗಿ ಘೋಷಿಸಿದ್ದಾರೆ.
ಸರ್ಕಾರ ಪ್ರಕಟಿಸಿರುವ ಎಲ್ಲ ೫ ಗ್ಯಾರೆಂಟಿಗಳನ್ನು ಪೂರೈಸಲು ಅಗತ್ಯ ಇರುವ ಆದಾಯವನ್ನು ಸೃಷ್ಠಿ ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.೨೦೨೩-೨೪ನೇ ಸಾಲಿನ ಮುಂಗಡ ಪತ್ರ ಮಂಡಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಹೂಡಿಕೆ ಹಾಗೂ ನೇರ ನಗದು ವರ್ಗಾವಣೆಯಿಂದ ರಾಜ್ಯದ ಆರ್ಥಿಕತೆಯನ್ನು ಉತ್ತೇಜಿಸಿ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಠಿಗೆ ಒತ್ತು ನೀಡುವುದಾಗಿ ಪ್ರಕಟಿಸಿದ್ದಾರೆ.೨೬೯೫೪ ಕೋಟಿ ಜಿಎಸ್‌ಟಿ ಕೊರತೆ ೨೦೨೩-೨೪ರ ಆರ್ಥಿಕ ವರ್ಷದಲ್ಲಿ ಸುಮಾರು ೨೬೯೫೪ ಕೋಟಿ ರೂ. ಜಿಎಸ್‌ಟಿ ಕೊರತೆ ಉಂಟಾಗಿದ್ದು, ರಾಜ್ಯದ ಆರ್ಥಿಕ ಪರಿಸ್ಥಿತಿಗೆ ದೊಡ್ಡ ಆಘಾತ ಉಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುತ್ತಿದ್ದ ಜಿಎಸ್‌ಟಿ ಪರಿಹಾರವನ್ನು ೨೦೨೨ರ ಜುಲೈ ತಿಂಗಳಿನಿಂದ ಸ್ಥಗಿತಗೊಳಿಸಿದೆ. ಇದರಿಂದ ಆರ್ಥಿಕ ಹೊರೆ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.ಕೇಂದ್ರ ಸರ್ಕಾರ ವಿಧಿಸುವ ಸೆಸ್ ಮತ್ತು ಸರ್‌ಜಾರ್ಜ್ ರಾಜ್ಯಗಳಿಗೆ ಹಂಚಿಕೆ ಮಾಡದೆ ತನ್ನ ಬಳಿಯೇ ಉಳಿಸಿಕೊಂಡಿದೆ. ಇದರಿಂದಾಗಿ ತೆರಿಗೆಗಳ ಮೇಲೆ ವಿಧಿಸುವ ಸೆಸ್ ಮತ್ತು ಸರ್‌ಜಾರ್ಜ್ ಹೆಚ್ಚುತ್ತಿದೆ. ರಾಜ್ಯಗಳಿಗೆ ಸೇರಬೇಕಾದ ತೆರಿಗೆ ಪಾಲು ಕಡಿಮೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.೨೦೨೨-೨೩ ರಲ್ಲಿ ಎಲ್ಲ ರಾಜ್ಯಗಳಿಂದ ೫,೨೦,೫೭೦ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಸೆಸ್ ಮತ್ತು ಸರ್‌ಜಾರ್ಜ್ ಮೂಲಕ ಸಂಗ್ರಹಿಸಿದೆ. ನಮ್ಮ ರಾಜ್ಯಕ್ಕೆ ೭,೭೮೦ ಕೋಟಿ ಬರುವುದು ನಷ್ಟವಾಗಿದೆ ಎಂದರು.ನಮ್ಮದು ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಳ್ಳುತ್ತಿದ್ದ ಹಿಂದಿನ ಬಿಜೆಪಿ ಸರ್ಕಾರ ಅನುದಾನ ತರುವಲ್ಲಿ ವಿಫಲವಾಗಿದೆ ಎಂದು ದೂರಿದ್ದಾರೆ.