ಆರ್ಥಿಕ ಪರಿಸ್ಥಿತಿ ದಿವಾಳಿ- ಬಿಜೆಪಿಗೆ ಸಿದ್ದರಾಮಯ್ಯ ತರಾಟೆ

ಬೆಂಗಳೂರು, ಮಾ 24- ರಾಜ್ಯ ಆರ್ಥಿಕ ದಿವಾಳಿಯತ್ತ‌ ಸಾಗಿದೆ ಎಂದು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿ ಕೈಯಲ್ಲಿ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮೇಲೆ ನಡೆದ ಚರ್ಚೆಗೆ‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ ಉತ್ತರಕ್ಕೆ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ತುಪ್ಪನಾದರೂ ತಿನ್ನಲಿ, ಬೆಣ್ಣೆನಾದ್ರು ತಿನ್ನಲಿ. ಆರ್ಥಿಕ ಪರಿಸ್ಥಿತಿ ಬಗ್ಗೆ ಅಂಕಿಅಂಶ ನೋಡಿದರೆ ಗೊತ್ತಾಗುತ್ತದೆ ಎಂದು ಟೀಕಿಸಿದರು.
ಸಾಲ ತಂದು ಸಂಬಳ ಕೊಡುವ ಅವಶ್ಯಕತೆ ಏನಿತ್ತು ಎಂದು ಪ್ರಶಿಸಿದ ಅವರು, ಸಾಲ ತಂದರೆ ಸಾಲದು.ಅದನ್ನು ತೀರಿಸುವ ಶಕ್ತಿ ಇದೆಯಾ ಎಂಬುದನ್ನು ಅರಿತು ಸಾಲ ಮಾಡಬೇಕು ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರ ಇರುವುದರಿಂದ ಡಬಲ್‌ ಎಂಜಿನ್‌ ಸರ್ಕಾರ, ಸ್ವರ್ಗವನ್ನೇ ತರುತ್ತೇವೆ ಎಂಬುದಾಗಿ ಭರವಸೆಗಳ ಮಹಾಪೂರವನ್ನೇ ಹರಿಸಿದ್ದರುಈಗ ಡಬಲ್‌ ಎಂಜಿನ್‌ ಗಾಡಿ ಹಿಂದಕ್ಕೆ ಹೋಗುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.