ಆರ್ಥಿಕ ಪರಿಸ್ಥಿತಿ ಚೇತರಿಕೆ ಸಿಎಂ ವಿಶ್ವಾಸ

ಬೆಂಗಳೂರು, ನ. ೧೪- ಕೋವಿಡ್‌ನಿಂದ ಹಿಂಜರಿಕೆ ಕಂಡಿದ್ದ ರಾಜ್ಯದ ಆರ್ಥಿಕ ಪರಿಸ್ಥಿತಿ ನಿಧಾನವಾಗಿ ಚೇತರಿಕೆ ಕಾಣುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಗ್ರಾಹಕ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಹಾಲು ಮಹಾಮಂಡಳ, ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳ ಹಾಗೂ ಸಹಕಾರ ಇಲಾಖೆಯ ಸಹಯೋಗದಲ್ಲಿ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿ ೬೭ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಸಹಕಾರಿ ವಲಯದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದವರಿಗೆ ಸಹಕಾರ ರತ್ನ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ಭಾರತ ಸೇರಿದಂತೆ ಇಡೀ ವಿಶ್ವದಲ್ಲೇ ಕೋವಿಡ್‌ನಿಂದ ಆರ್ಥಿಕ ಹಿಂಜರಿಕೆಯಾಗಿತ್ತು. ಪ್ರಸ್ತುತ ಆರ್ಥಿಕ ಪರಿಸ್ಥಿತಿ ನಿಧಾನವಾಗಿ ಚೇತರಿಕೆ ಕಾಣುತ್ತಿದೆ ಎಂದರು.
ಕೋವಿಡ್‌ನ ಲಾಕ್‌ಡೌನ್ ಸಂದರ್ಭದಲ್ಲಿ ಸಹಕಾರ ಇಲಾಖೆ ಮತ್ತು ಸಹಕಾರ ಸಂಸ್ಥೆಗಳು ಬಡ ಜನರಿಗೆ, ವಲಸೆ ಕಾರ್ಮಿಕರಿಗೆ, ದುರ್ಬಲ ವರ್ಗದವರಿಗೆ ಆಹಾರ, ದವಸ ಧಾನ್ಯಗಳ ವಿತರಣೆ, ತರಕಾರಿ ವಿತರಣೆ ವ್ಯವಸ್ಥೆಯನ್ನು ಅಭಾದಿತವಾಗಿ ನಡೆಸಿ ಮಹತ್ತರ ಕೊಡುಗೆ ನೀಡಿದೆ ಎಂದು ಹೇಳಿದರು.
ಕೋವಿಡ್‌ನ ಈ ಸಂಕಷ್ಟ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಹಕಾರ ಇಲಾಖೆಯ ಮೂಲಕ ೩೯,೬೦೦ ಕೋಟಿ ರೂ.ಗಳ ಆರ್ಥಿಕ ಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿವಿಧ ವಲಯಗಳ ಜನರಿಗೆ ಸಾಲ ವಿತರಣೆ ಮಾಡಲಾಗಿದೆ ಎಂದರು.
ಆತ್ಮನಿರ್ಭರ್ ಪ್ಯಾಕೇಜ್ ಅಡಿಯಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಯೋಜನೆಗಳನ್ನು ಘೋಷಣೆ ಮಾಡಿದೆ. ರೈತ ಉತ್ಪಾದಕ ಸಂಸ್ಥೆ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಲಿಷ್ಠಗೊಳಿಸಲು ೪೫೨೫ ಕೋಟಿ ರೂ.ಗಳ ಮೊತ್ತವನ್ನು ರಾಜ್ಯಕ್ಕೆ ಹಂಚಿಕೆ ಮಾಡಿದೆ ಎಂದು ಹೇಳಿದರು.
ಕೇಂದ್ರದ ಈ ಹಣದಿಂದ ಗ್ರಾಮೀಣ ಪ್ರದೇಶಗಲ್ಲಿ ಗೋದಾಮುಗಳ ನಿರ್ಮಾಣ, ಕೊಯ್ಲು ನಂತರದ ಸಂಸ್ಕರಣೆ, ಕೃಷಿ ಉತ್ಪನ್ನಗಳನ್ನು ರೈತರ ಜಮೀನಿನಿಂದಲೇ ಸಾಗಣೆ ಮಾಡಲು ಸಾರಿಗೆ ವ್ಯವಸ್ಥೆ, ಕೃಷಿ ಪತ್ತಿನ ಸಹಕಾರ ಸಂಘಗಳು ಬಹು ಉಪಯೋಗಿ ಸೇವೆಗಳನ್ನಾಗಿ ಬಳಸಲಾಗುವುದು ಎಂದು ತಿಳಿಸಿದರು.
ಈ ಯೋಜನೆಯಡಿ ೧೫೪೯ ಸಹಕಾರ ಸಂಘಗಳ ಯೋಜನೆಯ ಲಾಭ ಪಡೆಯಲಿದ್ದು, ಈಗಾಗಲೇ ೨೧೧ ಪ್ಯಾಕ್ಸ್‌ಗಳನ್ನು ಸೇರ್ಪಡೆ ಮಾಡಲಾಗಿದೆ ಎಂದರು.
ಸಹಕಾರ ಸಂಘಗಳ ಮೂಲಕ ರೈತರಿಗೂ ಸಾಲ ಒದಗಿಸಲಾಗುತ್ತಿದ್ದು, ೨೦೨೦-೨೧ನೇ ಸಾಲಿನಲ್ಲಿ ೧೫ ಲಕ್ಷಕ್ಕೂ ಹೆಚ್ಚು ರೈತರಿಗೆ ೯೫೦೨.೬೨ ಕೋಟಿ ರೂ.ಗಳ ಬೆಳೆ ಸಾಲ ವಿತರಿಸಿ ಬಡ್ಡಿ ಸಹಾಯ ಧನಕ್ಕಾಗಿ ೪೯೬.೨೪ ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ಕೋವಿಡ್-೧೯ ಸಂಕಷ್ಟದ ಸಂದರ್ಭದಲ್ಲಿ ರೈತರಿಗೆ ಕೃಷಿ ಸಾಲ ಒದಗಿಸಲು ಕೇಂದ್ರ ಸರ್ಕಾರವು ಸ್ಪೆಷಲ್ ಲಿಕ್ವಿಡಿಟಿ ಫೆಸಿಲಿಟಿ ಅಡಿಯಲ್ಲಿ ೧೭೦೦ ಕೋಟಿ ರೂ.ಗಳನ್ನು ನಬಾರ್ಡ್ ಮೂಲಕ ಡಿಸಿಸಿ ಬ್ಯಾಂಕ್‌ಗಳಿಗೆ ನೀಡಲಾಗಿದ್ದು, ರೈತರಿಗೆ ಸಾಲ ಒದಗಿಸಲಾಗಿದೆ ಎಂದು ತಿಳಿಸಿದರು.
ಸಹಕಾರ ಸಂಸ್ಥೆಗಳ ಸದಸ್ಯರು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಆರ್ಥಿಕ ನೆರವು ಪಡೆದು ಸರ್ಕಾರದ ಯೋಜನೆಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಇದರಿಂದ ನೆರವಾಗಿದೆ ಎಂದು ಅವರು ಹೇಳಿದರು.
ಸಹಕಾರ ಸಪ್ತಾಹ ಉದ್ದೇಶ ಸಹಕಾರ ಚಳವಳಿ, ಸಹಕಾರ ವ್ಯವಸ್ಥೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು. ಈ ವರ್ಷವೂ ಸಪ್ತಾಹವನ್ನು ಹಮ್ಮಿಕೊಂಡು ಪ್ರತಿದಿನ ಚಿಂತನಾರ್ಹ ವಿಷಯವನ್ನು ಆಯ್ದುಕೊಂಡು ಚರ್ಚೆ, ಸಮಲೋಚನೆಗಳನ್ನು ನಡೆಸುತ್ತಿರುವುದು ಸೂಕ್ತವಾಗಿದೆ. ಇದರಿಂದ ಸಹಕಾರ ಸಂಘದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಲಿ ಎಂದು ಅವರು ಆಶಿಸಿದರು.
ಸಮಾರಂಭದಲ್ಲಿ ಉಪಮುಖ್ಯಮಂತ್ರಿಗಳಾದ ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ, ಲಕ್ಷ್ಮಣಸವದಿ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್. ಕಂದಾಯ ಸಚಿವ ಆರ್. ಅಶೋಕ್, ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಹಕಾರ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.