ಆರ್ಥಿಕವಾಗಿ ಮಹಿಳೆ ಸಬಲವಾದರೆ ಕೌಟುಂಬಿಕ ಹಿಂಸೆ ಪ್ರಮಾಣ ಕಡಿಮೆಯಾಗಲಿದೆ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜ.೧೯; ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆಯ ಬಲ ಇದ್ದರೂ, ಮಹಿಳೆಯ ಮೇಲಿನ ಹಿಂಸೆ ಪ್ರಕರಣಗಳು ಕಡಿಮೆಯಾಗಿಲ್ಲ. ಹಿಂಸೆ ಅನುಭವಿಸಿದರೂ ಮಹಿಳೆಯರು ದೂರು ನೀಡಲು ಹಿಂದೇಟು ಹಾಕುತ್ತಾರೆ. ಇದಕ್ಕೆ ಮುಖ್ಯ ಕಾರಣ ಮಹಿಳೆಯರು ಆರ್ಥಿಕವಾಗಿ ಸಬಲರಾಗಿಲ್ಲ. ಆರ್ಥಿಕವಾಗಿ ಮಹಿಳೆಯರು ಸಬಲವಾದಂತೆ ಅವರ ಮೇಲಿನ ಹಿಂಸೆಯ ಪ್ರಮಾಣವೂ ಸಹ ಕಡಿಮೆಯಾಗುತ್ತವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ.ಗೀತಾ ಅಭಿಪ್ರಾಯಪಟ್ಟರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ “ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ” ಅನುಷ್ಠಾನದಲ್ಲಿ ಭಾಗೀದಾರ ಇಲಾಖೆಗಳ ಪಾತ್ರದ ಬಗ್ಗೆ ಎರಡು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಕೌಟುಂಬಿಕ ಹಿಂಸೆಗೆ ಒಳಗಾದ ಮಹಿಳೆ ಐಪಿಸಿ ಕಾಯ್ದೆಯಡಿ ದೂರು ದಾಖಲಿಸಿದರೆ ಅವರನ್ನು ಕುಟುಂಬದಿಂದ ಹೊರ ಇರುವಂತೆ ತಿಳಿಸಲಾಗುತ್ತಿತ್ತು. ಆದರೆ ಕೌಟುಂಬಿಕ ಹಿಂಸೆಯಿಂದ ಮಹಿಳೆಯ ಸಂರಕ್ಷಣಾ ಕಾಯ್ದೆಯಲ್ಲಿ ದೂರುದಾರ ಮಹಿಳೆ ಅದೇ ಕುಟುಂಬದೊಂದಿಗೆ ವಾಸವಿದ್ದು ರಕ್ಷಣೆ ಕೋರಬಹುದು. ಮನೆಯ ಇತರೆ ಸದಸ್ಯರು ಮಹಿಳೆಗೆ ಹಿಂಸೆ ನೀಡದಂತೆ ಕಾಯ್ದೆಯ ಅನುಸಾರ ನಿಯಂತ್ರಿಸಲು ಅವಕಾಶವಿದೆ ಎಂದರು.