ಆರ್ಥಿಕತೆಗೆ ಕೋವಿಡ್ ಅಪಾಯ

ನವದೆಹಲಿ, ಏ. ೦೮: ಜಾಗತಿಕ ಸನ್ನಿವೇಶದಲ್ಲಿ ಭಾರತ ಮತ್ತೆ ಆರ್ಥಿಕತೆಯಲ್ಲಿ ಧನಾತ್ಮಕ ಬೆಳವಣಿಗೆಗೆ ಮರಳುತ್ತಿದ್ದು, ಆದರೆ, ಕೋವಿಡ್ ಮತ್ತಷ್ಟು ಹಾನಿಕಾರಕ ಅಪಾಯ ತದ್ದೊಡುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ- ಐಎಂಎಫ್ ನ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಜಾಗತಿಕ ಸನ್ನಿವೇಶದಲ್ಲಿ ಭಾರತದ ಆರ್ಥಿಕ ಚೇತರಿಕೆ ಕಂಡು ಬಂದಿದೆ. ಭಾರತವು ವರ್ಷದಿಂದ ವರ್ಷಕ್ಕೆ ಧನಾತ್ಮಕ ಬೆಳವಣಿಗೆಗೆ ಮರಳಲಿದೆ. ಅದು ಆರ್ಥಿಕ ಹಿಂಜರಿತದ ಆಳದಿಂದ ನೋಡಿದರೆ, ಸಕಾರಾತ್ಮಕ ಬೆಳವಣಿಗೆಗೆ ಕಾಣಬಂದಿದೆ ಎಂದು ಅಭಿಪ್ರಾಯಪಟ್ಟರು.
ಪ್ರಸಕ್ತ ೨೦೨೧ರಲ್ಲಿ ಭಾರತಕ್ಕೆ ಶೇ.೧೨.೫ರಷ್ಟು ಹಣಕಾಸು ಬೆಳವಣಿಗೆಯ ದರವನ್ನು ಅಂದಾಜಿಸಿದ್ದು, ದೇಶದಲ್ಲಿ ಆರ್ಥಿಕ ಚಟುವಟಿಕೆ ಸಾಮಾನ್ಯೀಕರಣವಾಗಿದೆ. ಸದ್ಯದ ಭಾರತದ ಆರ್ಥಿಕ ಸ್ಥಿತಿ ಸುಧಾರಿಸಿದ್ದು, ಮುಂದೆ ಎದುರಾಗುವ ಸವಾಲುಗಳಿಗೆ ಸನ್ನದ್ಧವಾಗಬೇಕಿದೆ. ಕೋವಿಡ್ ಬಗ್ಗೆ ಸಾರ್ವಜನಿಕರು ಎಚ್ಚೆತ್ತಕೊಳ್ಳಬೇಕು ಎಂದು ಹೇಳಿದರು.
ಕೋವಿಡ್ ನಂತರದ ಕಾಲಮಾನದಲ್ಲಿ ಭಾರತದ ಆರ್ಥಿಕ ಚಟುವಟಿಕೆಯಲ್ಲಿ ನಿರಂತರ ಹೆಚ್ಚಳ ಕಾಣಬಂದಿದೆ. ಸಾಮಾನ್ಯೀಕರಣ, ಹೆಚ್ಚಿನ ಆವರ್ತನ ಸೂಚಕಗಳ ಚೇತರಿಕೆ ಕಾರಣವಾಗಿದೆ. ಫೆಬ್ರವರಿಯಲ್ಲಿ ಮಂಡನೆಯಾದ ಬಜೆಟ್,ಆರ್ಥಿಕ ಬೆಳವಣಿಗೆಯ ಮುನ್ಸೂಚನೆ ಆಗಬಲ್ಲದು ಎಂದು ಗೀತಾ ಗೋಪಿನಾಥ್ ಅಭಿಪ್ರಾಯಪಟ್ಟರು.
ಈಗಿನ ಪರಿಸ್ಥಿತಿಯಲ್ಲಿ ಭಾರತ ಧನಾತ್ಮಕ ಬೆಳೆವಣೆಗಳನ್ನು ಹೊಂದಿದೆ ನಿಜ, ಆದರೆ, ಕೋವಿಡ್ ೨ನೇ ಅಲೆ ಉಲ್ಬಣಗೊಂಡರೆ ದೇಶದ ಆರ್ಥಿಕ ಬೆಳವಣೆಗೆ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರಬಲ್ಲದು. ಹಾಗಾಗಿ ಆರ್ಥಿಕ ಚಟುವಟಿಕೆಯ ಸೂಕ್ಷ್ಮತೆಯ ಮೇಲೆ ಅದ್ಯ ಗಮನಹರಿಸಬೇಕಾಗಿದೆ. ಭಾರತದ ಚೇತರಿಕೆಯನ್ನು ಚೀನಾದೊಂದಿಗೆ ಹೋಲಿಸಿದರೆ ಈ ವಿಷಯದಲ್ಲಿ ಚೀನಾ ಮುಂದಿದೆ ಎಂದು ಹೇಳಿದರು.

ಬಜೆಟ್ ಅಭಿವೃದ್ಧಿಯತ್ತ ಹೆಜ್ಜೆ ಹಾಕಲು ಸಹಕಾರಿ

ಕೇಂದ್ರ ಸರ್ಕಾರ ಮಂಡಿಸಿರುವಬಜೆಟ್, ನಿಜವಾಗಿಯೂ ಖಾಸಗೀಕರಣದ ರಂಗದಲ್ಲಿ ಮಹತ್ವಾಕಾಂಕ್ಷೆಯ ಭರವಸೆಯನ್ನು ಹೆಚ್ಚಿಸಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಇದು ಭಾರತಕ್ಕೆ ಒಳ್ಳೆಯದು. ಬಜೆಟ್ ನಿಜವಾಗಿಯೂ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದೆ ಎಂದು ಹೇಳಬಹುದು. ಆರ್ಥಿಕ ಕ್ರೂಢೀಕರಣ ಸಾಮಾನ್ಯದ ವಿಷಯವಲ್ಲ. ಅದು ಸವಾಲಿನ ಸಂಗತಿ. ಹೆಚ್ಚು ಪರಿಣಾಮಕಾರಿ ಜಿಎಸ್ಟಿ ಅನುಷ್ಠಾನ ಮತ್ತು ಸಬ್ಸಿಡಿ ವ್ಯರ್ಥವನ್ನು ತೆಗೆದುಹಾಕುವ ಮೂಲಕ ಆದಾಯ ಸಂಗ್ರಹಣೆಯ ಇತರ ರೂಪಗಳನ್ನು ಮಾಡುವುದು ಮುಖ್ಯ ಎಂದು ಗೀತಾ ಗೋಪಿನಾಥ್ ಸಲಹೆ ನೀಡಿದರು.