ಆರ್ಟೆಮಿಸ್ ಉಡಾವಣೆ ಒಂದು ವರ್ಷ ವಿಳಂಬ

ನ್ಯೂಯಾರ್ಕ್, ಜ.೧೦- ಮುಂಬರುವ ಅಮೆರಿಕಾದ ನಾಸಾದ ಮಹತ್ವಕಾಂಕ್ಷೆಯ ಚಂದ್ರನ ಮಿಷನ್ (ಆರ್ಟೆಮಿಸ್-೨, ಆರ್ಟೆಮಿಸ್-೩)ಗಳು ಒಂದು ವರ್ಷದ ಹಿನ್ನಡೆ ಕಾಣಲಿದೆ. ಎರಡೂ ಮಿಷನ್‌ಗಳು ತಲಾ ಒಂದೊಂದು ವರ್ಷ ಮುಂದೂಡಲ್ಪಟ್ಟಿದೆ. ೨೦೨೪ರಲ್ಲಿ ನಡೆಯಲಿದ್ದ ಆರ್ಟೆಮಿಸ್-೨ ಹಾಗೂ ೨೦೨೫ರಲ್ಲಿ ಉಡಾವಣೆ ಆಗಲಿದ್ದ ಆರ್ಟೆಮಿಸ್-೩ ಇದೀಗ ತಲಾ ಒಂದು ವರ್ಷ ಮುಂದೂಡಲ್ಪಟ್ಟಿದೆ.
೨೦೨೨ರ ನವೆಂಬರ್‌ನಲ್ಲಿ ಆರ್ಟೆಮಿಸ್-೧ ನಡೆದಿದ್ದು, ಡಿಸೆಂಬರ್‌ನಲ್ಲಿ ಅಂತ್ಯಗೊಂಡಿತ್ತು. ಅಲ್ಲದೆ ವೈಜ್ಞಾನಿಕ ಆವಿಷ್ಕಾರ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಚಂದ್ರನ ಮೇಲೆ ದೀರ್ಘಕಾಲೀನ ಅಸ್ತಿತ್ವವನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಮೊದಲ ಹೆಜ್ಜೆಯನ್ನು ಇಲ್ಲಿ ಗುರುತಿಸಲಾಗಿದೆ. ೧೯೭೨ರಲ್ಲಿ ನಾಸಾವು ಅಪೊಲೊ ಮಿಷನ್ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಮಾನವನನ್ನು ಚಂದ್ರನ ಮೇಲ್ಮೈಗೆ ತೆಗೆದುಕೊಂಡು ಹೋಗುವಲ್ಲಿ ಸಫಲತೆ ಕಂಡಿತ್ತು. ೨೦೨೪ರಲ್ಲಿ ಆರ್ಟೆಮಿಸ್-೨ರ ಯೋಜನೆಗೆ ಸಮಯ ನಿಗದಿಪಡಿಸಿತ್ತು. ಇದರನ್ವಯ ನಾಲ್ಕು ಮಂದಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಲು ಯೋಜನೆ ರೂಪಿಸಲಾಗಿತ್ತು. ಅಲ್ಲದೆ ಆರ್ಟೆಮಿಸ್-೩ರ ಪ್ರಕಾರ ನಾಲ್ವರು ಗಗನಯಾತ್ರಿಗಳನ್ನು ಚಂದ್ರನ ಮೇಲೆ ತೆಗೆದುಕೊಂಡು ಹೋಗುವ ಯೋಜನೆ ರೂಪಿಸಲಾಗಿತ್ತು. ಆದರೆ ಇದೀಗ ಎರಡೂ ಯೋಜನೆಯಲ್ಲಿ ವಿಳಂಬವಾಗಿದೆ. ತಲಾ ಒಂದೊಂದು ವರ್ಷ ಮುಂದೂಡಲಾಗಿದೆ. ?ಒಂದು ವರ್ಷದ ವಿಳಂಬದ ಹಿನ್ನೆಲೆಯಲ್ಲಿ ಆರ್ಟೆಮಿಸ್-೩ ಯೋಜನೆಯಲ್ಲಿ ಮತ್ತಷ್ಟು ತಂತ್ರಜ್ಞಾನದ ಅಭಿವೃದ್ಧಿಯನ್ನು ಸಕ್ರಿಯಗೊಳಿಸಲಿದೆ? ಎಂದು ನಾಸಾ ತಿಳಿಸಿದೆ. ಆದರೆ ಯೋಜನೆಗೆ ಈ ಹಿಂದೆ ದಿನಾಂಕ ಘೋಷಣೆಯಾಗಿದ್ದರೂ ಮುಖ್ಯವಾಗಿ ನಾಸಾವು ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇರಿಸಲು ಅಥವಾ ಅವರು ಧರಿಸಬಹುದಾದ ಬಾಹ್ಯಾಕಾಶ ಉಡುಪುಗಳನ್ನು ಇನ್ನೂ ಹೊಂದಿಲ್ಲ. ವಿಳಂಬದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಸಾದ ಆಡಳಿತಕಾರ ಬಿಲ್ ನೆಲ್ಸನ್, ಸುರಕ್ಷತೆಯ ಎಲ್ಲಾ ಸಮಯದ ಪರಿಗಣನೆಗಳನ್ನು ನಾವು ನಡೆಸುತ್ತಿದ್ದೇವೆ. ನಾವು ಸಿದ್ಧವಾಗುವವರೆಗೆ ಹಾರುವುದಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ನಾವು ಆರ್ಟೆಮಿಸ್-೨ ಯೋಜನೆಗೆ ೨೦೨೫ ಹಾಗೂ ಆರ್ಟೆಮಿಸ್-೩ರ ಯೋಜನೆಗೆ ೨೦೨೬ರ ದಿನಾಂಕವನ್ನು ಹೊಂದಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.