ಆರ್‌ಟಿಪಿಎಸ್‌ನಲ್ಲಿ ತಾಂತ್ರಿಕ ದೋಷ ವಿದ್ಯುತ್ ಉತ್ಪಾದನೆ ಕುಂಠಿತ

ರಾಯಚೂರುರು,ಜು.೧೪:ತಾಂತ್ರಿಕ ದೋಷದಿಂದಾಗಿ ರಾಯಚೂರು ಶಾಖೋತ್ಪನ್ನ ಸ್ಥಾವರದ ೩ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಇದರಿಂದಾಗಿ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದೆ.
ಘಟಕದ ೧೨ ಹಾಗೂ ೩ನೇ ಘಟಕಗಳಲ್ಲಿ ಕಂಡು ಬಂದಿರುವ ತಾಂತ್ರಿಕ ದೋಷವೇ ಇದಕ್ಕೆ ಕಾರಣವಾಗಿದೆ. ೧೭೨೦ ಮೆಗಾವ್ಯಾಟ್ ಸಾಮರ್ಥ್ಯದ ಆರ್‌ಟಿಪಿಎಸ್‌ನ ೫ ಘಟಕಗಳಲ್ಲಿ ೬೭೮ ಮೆಗಾವ್ಯಾಟ್ ವಿದ್ಯುತ್ ಮಾತ್ರ ಉತ್ಪಾದನೆಯಾಗುತ್ತಿದೆ. ಘಟಕದಲ್ಲಿ ಹಾರೋ ಬೂದಿ ಸಾಗಾಣಿಕೆಯ ಬಂಕ್ಲರ್ ಕುಸಿದು ಬಿದ್ದಿದ್ದು, ಕಳೆದ ೧೧ ತಿಂಗಳಿನಿಂದ ೧ನೇ ವಿದ್ಯುತ್ ಘಟಕದಲ್ಲಿ ದುರಸ್ಥಿ ಕಾರ್ಯ ನಡೆಯುತ್ತಿದೆ. ಇದು ವಿಳಂಬವಾಗುತ್ತಿರುವುದರಿಂದ ವಿದ್ಯುತ್ ಉತ್ಪಾದನೆಯೂ ಕುಂಠಿತಗೊಳ್ಳಲು ಕಾರಣವಾಗಿದೆ.
ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದ ೬ನೇ ಘಟಕ ಈಗ ಮತ್ತೆ ಕಾರ್ಯಾರಂಭ ಮಾಡಿದೆ. ೨ ಮತ್ತು ೩ನೇ ಘಟಕದಲ್ಲಿ ಇನ್ನೂ ತಾಂತ್ರಿಕ ಸಮಸ್ಯೆ ಬಗೆಹರಿಯದ ಕಾರಣ ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ.
ಇತ್ತೀಚೆಗೆ ಆರ್‌ಟಿಪಿಎಸ್‌ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಭೇಟಿ ನೀಡಿ ೨ ಮತ್ತು ೩ನೇ ಘಟಕಗಳಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು, ಆದರೆ, ಜಾರ್ಜ್ ಭೇಟಿಯ ನಂತರವೂ ಸಮಸ್ಯೆ ಬಗೆಹರಿದಿಲ್ಲ. ಇದರಿಂದಾಗಿ ಆರ್‌ಟಿಪಿಎಸ್‌ನಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತಗೊಳ್ಳಲು ಕಾರಣವಾಗಿದೆ.