ಆರ್ಟಿಕಲ್ 371 J ಅಡಿಯಲ್ಲಿ ಮೀಸಲಾತಿ ಕೋರಿ ಪ್ರಿಯಾಂಕ್ ಖರ್ಗೆ ಪತ್ರ

ಕಲಬುರಗಿ:ಮಾ.13:ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆಯಲ್ಲಿ 371 J ಮೀಸಲಾತಿ ಕೋರಿರುವ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತಯಾರಿಸುವ ಸಂದರ್ಭದಲ್ಲಿ ಅನುಸರಿಸುವ ವಿಧಾನದಲ್ಲಿನ ಗೊಂದಲ ಸರಿಪಡಿಸುವಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ ಸಚಿವರಾದ ಹಾಗೂ ಅನುಚ್ಛೇದ 371 J ಅನುಷ್ಠಾನ ಕುರಿತಾದ ಸಚಿವ ಸಂಪುಟದ ಉಪಸಮಿತಿಯ ಅಧ್ಯಕ್ಷರಾದ ಪ್ರಿಯಾಂಕ್ ಖರ್ಗೆ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಹಾಗೂ ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಇವರಿಗೆ ಪತ್ರ ಬರೆದು ಸೂಚಿಸಿದ್ದಾರೆ.

ಕಕ ಪ್ರದೇಶದ 371 J ಮೀಸಲಾತಿ ಅನುಷ್ಟಾನಕ್ಕಾಗಿ ರಾಜ್ಯ ಸರ್ಕಾರ ದಿನಾಂಕ 01.02.2023 ರ ಸುತ್ತೋಲೆಯಲ್ಲಿ ಮಾರ್ಗಸೂಚಿಗಳನ್ನು ನಿಗದಿಪಡಿಸಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳನ್ನು ಆಯ್ಕೆ ಪಟ್ಟಿ ತಯಾರಿಸುವ ವಿಧಾನಗಳನ್ನು ಸೂಚಿಸಿದೆ. ಆದರೂ ಕೂಡಾ ಪ್ರಾಧಿಕಾರ ಸೂಚಿಸಿದ ವಿಧಾನಗಳನ್ನು ಪಾಲನೆ ಮಾಡದಿರುವುದು ಕಂಡುಬರುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಅವರು ಪತ್ರದಲ್ಲಿ‌ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಸಚಿವರ ಪತ್ರದ ಸಾರಾಂಶ ಹೀಗಿದೆ ;

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒಂದು ತಿಂಗಳಲ್ಲಿ ಬಿಎಂಟಿಸಿ ಕಂಡಕ್ಟರ್ ಹುದ್ದೆಗೆ ಹೊರಡಿಸಲಾದ ಅಧಿಸೂಚನೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಂದ ಬಹು ಆಯ್ಕೆ ನಮೂದಿಸುವಂತೆ ಕೋರಿರುತ್ತೀರಿ. ಅದೇ ರೀತಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬೆಂಗಳೂರು ಇದರ ಸಹಾಯಕ ಇಂಜಿನಿಯರ್ ಹಾಗೂ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ಸ್ಥಳೀಯ ಹಾಗೂ ಮಿಕ್ಕುಳಿದ ವೃಂದಕ್ಕೆ ಒಂದೇ ಅಧಿಸೂಚನೆ ಹೊರಡಿಸಿರುತ್ತೀರಿ, ಆದರೆ ಯಾವ ರೀತಿ ಆಯ್ಕೆ ಮಾಡಲಾಗುತ್ತಿದೆ ಎನ್ನುವುದನ್ನು ವಿವರಿಸಿರುವುದಿಲ್ಲ. ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಬೆಂಗಳೂರು ನಗರದಲ್ಲಿ ಸ್ಥಳೀಯ ವೃಂದ ಹಾಗೂ ಮಿಕ್ಕುಳಿದ ವೃಂದ ಪ್ರತ್ಯೇಕಗೊಳಿಸಿರುವುದಿಲ್ಲ. ಇದು ನಿಯಮದ ವಿರುದ್ಧವಾಗಿದೆ. ಅಲ್ಲದೇ, ಯಾವ ರೀತಿ ಆಯ್ಕೆ ಮಾಡಲಾಗುತ್ತದೆ ಎನ್ನುವುದನ್ನೂ ಕೂಡಾ ವಿವರಿಸಿರುವುದಿಲ್ಲ. ಅದೇ ರೀತಿ ಬೆಂಗಳೂರು ಅಭಿವೃದ್ಧಿ ಪಾಧಿಕಾರದಲ್ಲಿ ಪ್ರಥಮ ದರ್ಜೆ ಸಹಾಯಕ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಸ್ಥಳೀಯ ಹಾಗೂ ಮಿಕ್ಕುಳಿದ ವೃಂದಕ್ಕೆ ಒಂದೇ ಅಧಿಸೂಚನೆ ಹೊರಡಿಸಿರುತ್ತೀರಿ. ಆದರೆ, ಯಾವ ರೀತಿ ಆಯ್ಕೆ ಮಾಡಲಾಗುತ್ತದೆ ಎನ್ನುವುದನ್ನು ವಿವರಿಸಿರುವುದಿಲ್ಲ. ಅಲ್ಲದೇ, ಸರಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆಯಲ್ಲಿಯೂ ಸಹ ಯಾವ ರೀತಿ ಆಯ್ಕೆ ಪಟ್ಟಿ ತಯಾರಿಸಲಾಗುತ್ತದೆ ಎನ್ನುವುದನ್ನೂ ವಿವರಿಸಿರುವುದಿಲ್ಲ.

ಪೊಲೀಸ್ ಸಬ್ ಇನ್ಸಪೆಕ್ಟರ್ (ಸಿವಿಲ್ ) 545 ಹುದ್ದೆಗಳ ನೇಮಕಾತಿಗೆ ಮರುಪರೀಕ್ಷೆ ನಡೆಸಲಾಗಿದ್ದು ಸದರಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ತಯಾರಿಸುವ ಮುಂಚೆ 371-J ಮೀಸಲಾತಿ ಕೋರಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳನ್ನು ಸರ್ಕಾರದ ಪ್ರಸ್ತುತ ಜಾರಿಯಲ್ಲಿರುವ ದಿನಾಂಕ : 01.02.2023 ರ ಸುತ್ತೋಲೆಯನ್ನು ಕಡ್ಡಾಯವಾಗಿ ಅನುಸರಿಸಿ ಗೊಂದಲಕ್ಕೆ ಆಸ್ಪದ ಕೊಡದಂತೆ ಗಮನಹರಿಸುವುದು‌.

ಈ ಎಲ್ಲಾ ನೇಮಕಾತಿ ಅಧಿಸೂಚನೆಗಳು 371-J ಅನುಷ್ಠಾನದ ಸಂದರ್ಭದಲ್ಲಿ ಕಕ ಪ್ರದೇಶ ಅಭ್ಯರ್ಥಿಗಳನ್ನು ಯಾವ ಸುತ್ತೋಲೆಯಂತೆ ಆಯ್ಕೆ ಮಾಡಲಾಗುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ನಮೂದಿಸಿಲ್ಲವಾದ್ದರಿಂದ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಲ್ಲಿ ಗೊಂದಲ ಉಂಟಾಗಿರುತ್ತದೆ.ಆದ್ದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಮೇಲಿನ ಎಲ್ಲ ನೇಮಕಾತಿ ಅಧಿಸೂಚನೆಗಳಲ್ಲಿ 371 J ಮೀಸಲಾತಿ ಕೋರಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳನ್ನು ಸರ್ಕಾರದ ಪ್ರಸ್ತುತ ಜಾರಿಯಲ್ಲಿರುವ ದಿನಾಂಕ : 01.02.2023 ರ ಸುತ್ತೋಲೆಯನ್ನು ಕಡ್ಡಾಯವಾಗಿ ಅನುಸರಿಸಿ ತಿದ್ದುಪಡಿ ಅಧಿಸೂಚನೆ ಹೊರಡಿಸುವಂತೆ ಸೂಚಿಸಿದೆ