ಆರ್ಚಿಡ್ ಮಹಲ್ ಪಕ್ಕದ ಬಸ್ ಸಂಚರಿಸುವ ಸ್ಥಳ ನಿಲುಗಡೆ ಮುಕ್ತ ಮಾಡಲು ಒತ್ತಾಯ

ಕಲಬುರಗಿ:ನ.17: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸಂಬಂಧಿಸಿದ ಆರ್ಚಿಡ್ ಮಹಲ್ ಪಕ್ಕದ ಬಸ್ ಓಡಾಡುವ ಸ್ಥಳವನ್ನು ಸಂಪೂರ್ಣ ಪಾರ್ಕಿಂಗ್ ಮುಕ್ತ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ್ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮರಾವ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಅವರು, ಆರ್ಚಿಡ್ ಮಹಲ್ ಹಿಂದುಗಡೆ ಇರುವ ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ತಿಂಗಳಲ್ಲಿ ಒಂದು ದಿನ ಬಸ್ ಓಡಿದರೆ, ಉಳಿದ ದಿನಗಳಲ್ಲಿ ಬಸ್ ಓಡಿಸದೇ ಬಂದ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಆಗ ಕೆಲ ಪ್ರಭಾವಿಗಳು ಬಸ್ ಓಡಾಡುವ ಸ್ಥಳದಲ್ಲಿ ದಿನಕ್ಕೆ ಲಕ್ಷಾಂತರ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಾರೆ. ಇದರಿಂದ ಸರ್ಕಾರಕ್ಕೆ ಬರಬೇಕಾದ ಆದಾಯ ಕೆಲ ಪ್ರಭಾವಿಗಳ ಜೇಬಿಗೆ ಹೋಗುತ್ತಿದೆ ಎಂದು ಆರೋಪಿಸಿದ್ದಾರೆ.
ಬಸ್ ಓಡಾಡಿದರೆ ಆದಾಯ ಸರ್ಕಾರದ ಖಜಾನೆಗೆ ಹೋಗುವುದಲ್ಲದೇ ಸಾರ್ವಜನಿಕರಿಗೂ ಕೂಡಾ ಅನುಕೂಲವಾಗುತ್ತದೆ. ಇಲ್ಲಿ ಬಸ್ಸು ಓಡಿಸದೇ ಇರುವುದು ಕೆಲ ಪ್ರಭಾವಿಗಳ ಒತ್ತಡಕ್ಕೆ ಮಣಿದು ಬಸ್ ಬಂದ ಮಾಡಲಾಗುತ್ತಿದೆ ಎಂದು ಜನ ಗುಸು ಗುಸು ಮಾತನಾಡುತ್ತಿದ್ದಾರೆ. ಒಂದು ಒಳ್ಳೆಯ ಬೆಳವಣೆಗೆ ಏನೆಂದರೆ ತಾವು ಅಧಿಕಾರ ಸ್ವೀಕರಿಸಿದ ಮೇಲೆ ಪಾರ್ಕಿಂಗ್ ವಸೂಲಿ ನಿಲ್ಲಿಸಿದ್ದಿರಿ. ಅದಕ್ಕಾಗಿ ನಗರ ಜನತೆಯ ಪರವಾಗಿ ತಮಗೆ ಧನ್ಯವಾದಗಳನ್ನು ಹೇಳುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಆದಾಗ್ಯೂ, ಕಚೇರಿ ಅವಧಿ ಮುಗಿದ ಮೇಲೆ ಸಂಸ್ಥೆಯ ಸಿಬ್ಬಂದಿಗಳೆಲ್ಲ ಮನೆಗೆ ಹೋದ ಕೂಡಲೆ ಮತ್ತೆ ಪಾರ್ಕಿಂಗ್ ಶುಲ್ಕ ವಸೂಲಿ ಪ್ರಾರಂಭವಾಗುತ್ತಿದೆ. ಆದ್ದರಿಂದ ಅದನ್ನು ಸಂಪೂರ್ಣ ನಿಲ್ಲಿಸಬೇಕು ಮತ್ತು ಇಲ್ಲಿಯವರೆಗೂ ಅನಧಿಕೃತವಾಗಿ ವಸೂಲಿ ಮಾಡಿದ ಪಾರ್ಕಿಂಗ್ ಶುಲ್ಕವನ್ನು ದಂಡದ ಸಮೇತ ವಸೂಲಿ ಮಾಡಬೇಕು, ಕೂಡಲೇ ಬಸ್ ಪ್ರಾರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಒಂದು ತಿಂಗಳದ ಒಳಗಾಗಿ ಬೇಡಿಕೆಗಳು ಈಡೇರದಿದ್ದರೆ ಧರಣಿ ಸತ್ಯಾಗ್ರಹ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಹಿಂದೂ ಜಾಗೃತ ಸೇನೆಯ ವಿಭಾಗೀಯ ಅಧ್ಯಕ್ಷ ಲಕ್ಷ್ಮೀಕಾಂತ್ ಸ್ವಾದಿ, ಮಹಾದೇವ್ ಕೋಟನೂರ್, ನಿತಿನ್ ತಿವಾರಿ, ಗುರುರಾಜ್ ಸ್ವಾಮಿ, ಪ್ರಶಾಂತ್ ಶಿರೂರ್ ಮುಂತಾದವರು ಉಪಸ್ಥಿತರಿದ್ದರು.