ಆರ್‍ಎಸ್‍ಎಸ್ ಒತ್ತಡದಲ್ಲಿ ಇಂದಿನ ಪಠ್ಯ ರಚನೆ ಕಳವಳ

ಶಹಾಪುರ:ಆ.1:ಶಿಕ್ಷಣ ತಜ್ಞರು ಮತ್ತು ಪಾಲಕರು ಸೇರಿ ಇಂದಿನ ಯುವ ವಿದ್ಯಾರ್ಥಿಗಳು ದೇಶ ಮುನ್ನಡೆಸಲು ಬೇಕಾದಂತಹ ಪಠ್ಯ ರಚನೆಯಾಗಬೇಕಿದೆ ಆದರೆ ಇಂದು ಆರ್‍ಎಸ್‍ಎಸ್ ಒತ್ತಡದಲ್ಲಿ ರಾಜಕೀಯ ನಿರ್ಧರಿಸುವ ಪಠ್ಯ ರಚನೆಯಾಗುತ್ತಿರುವುದು ವಿಷಾಧನೀಯ ಸಂಗತಿ ಎಂದು ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಕಳವಳ ವ್ಯಕ್ತ ಪಡಿಸಿದರು. ಮಾನವೀಯತೆ, ವೈಚಾರಿಕತೆ ಮತ್ತು ವೈಜ್ಞಾನಿಕತೆಯ ತಳಹದಿಯ ಮೇಲೆ ಶೈಕ್ಷಣಿಕ ವ್ಯವಸ್ಥೆ ನಿಲ್ಲಬೇಕಿದೆ. ಹೊಸ ಶಿಕ್ಷಣ ನೀತಿ ಕುರಿತು ಸಂವಾದ, ಚರ್ಚೆ ನಡೆಸಿ ಮನೆಯನ್ನು ಪ್ರೀತಿಸುವಂತ ಶಿಕ್ಷಣ ಜಾರಿಯಾಗಬೇಕು. ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯವನ್ನು ಮೋಬೈಲ್‍ನೊಂದಿಗೆ ಕಳೆಯಬಾರದು. ಅಧ್ಯಾಪಕರು ಅಧ್ಯಯನಶೀಲರಾಗುವುದು ಅವಶ್ಯವಾಗಿದೆ ಎಂದು ಹೇಳಿದರು.
ಹತ್ತಿರದ ಭೀಮರಾಯನಗುಡಿ ಕೃಷಿ ಪ್ರಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ ಕನ್ನಡ ವಿದ್ಯಾ ಸ್ಪೂರ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಭವಿಷ್ಯತ್ತಿನ ಭಾರತದಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ವಿಚಾರ ಸಂಕಿರ್ಣ ಕಾರ್ಯಕ್ರಮದ ಪ್ರಮುಖ ಭಾಷಣಕಾರರಾಗಿ ಮಾತನಾಡಿದರು.
ಭವ್ಯ ಭಾರತದ ಭವಿಷ್ಯ ಕಣ್ಣೆದುರಿಗಿದೆ ಆದರೆ ಇಂದಿನ ವಿದ್ಯಾರ್ಥಿಗಳು ಆತಂಕ ಮತ್ತು ಭಯದಲ್ಲಿ ಸಾಗುತ್ತಿದ್ದಾರೆ. ದೇಶದ ಮಹಾನ್ ದಾರ್ಶನಿಕರ ಆಶೆಯಂತೆ ವಿದ್ಯಾರ್ಥಿಗಳು ಅತ್ಯಂತ ನಿರ್ಣಾಯಕ ಪಾತ್ರ ವಹಿಸುವುದು ಅಗತ್ಯವಾಗಿದೆ ಡಾ.ಘಂಟಿ ಹೇಳಿದರು.ಪÀ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಓದುವ ಮನೋಭಾವ,ಉದ್ದೇಶ ಮತ್ತು ಅಗತ್ಯಗಳನ್ನು ಅರಿತವರಾಗಿರಬೇಕು ಎಂದು ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು. ಇಂದು ವಿದ್ಯಾರ್ಥಿಗಳಲ್ಲಿ ಜಾತಿ ವಿಷ ಬೀಜ ಬಿತ್ತನೆ ಕೆಲಸ ನಡೆದಿದೆ. ಭಾರತದ ಭವಿಷ್ಯ ವಿದ್ಯಾರ್ಥಿಗಳ ಮೇಲೆ ಅವಲಂಭಿಸಿದ್ದು ಸಂಕೀರ್ಣ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಮೂಲ್ಯವಾಗಿದೆ. ಇಂತಹ ಸಂದರ್ಭದಲ್ಲಿ ತಾಲೂಕು ಕಸಾಪ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯವಾದುದು ಎಂದರು.
ಕಸಪ ವತಿಯಿಂದ ತಾಲೂಕಿನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದಿದ ಪ್ರತಿಭಾವಂತ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕನ್ನಡ ವಿದ್ಯಾ ಸ್ಪೂರ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದವರಿಗೆ ಹಾಗೂ ಗುರು ವೃಂದಕ್ಕೆ ಕಸಾಪ ಪೋಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಯಾದಗಿರಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಾಂತಗೌಡ ಪಾಟೀಲ, ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ನಿಕಟಪೂರ್ವ ಅಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ, ಬಿಇಒ ರುದ್ರಗೌಡ ಪಾಟೀಲ,ಚಂದ್ರಶೇಖರ ಲಿಂಗದಹಳ್ಳಿ, ತಾಲುಕು ಕಸಾಪ ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿಗಳಾದ ರಾಘವೇಂದ್ರ ಹಾರಣಗೇರಾ ಸರ್ವರನ್ನು ಸ್ವಾಗತಿಸಿದರು, ಸುರೇಶ ಅರುಣಿ ನಿರೂಪಿಸಿದರು. ಕೋಶಾಧ್ಯಕ್ಷ ಶಂಕರ ಹುಲಕಲ್ ವಂದಿಸಿದರು. ಕಲಾವಿದ ಬೂದಯ್ಯ ಹಿರೇಮಠ ತಂಡದಿಂದ ಸಂಗೀತ ಗಾಯನ ನೆರವೇರಿತು. ತಾಲೂಕಿನ ಶಿರವಾಳ, ಗೋಗಿ,ದೋರನಹಳ್ಳಿ,ಭೀಮರಾಯನಗುಡಿ ವಲಯ ಕಸಾಪ ಅಧ್ಯಕ್ಷರು, ಕಸಾಪ ಪದಾಧಿಕಾರಿಗಳು, ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು,ಸಾಹಿತ್ಯಾಸಕ್ತರು ಭಾಗವಹಿಸಿದ್ದರು.