ಆರೋಪ ಸುಳ್ಳು:ಎಚ್‌ಡಿಕೆಗೆ ಸಿದ್ದು ಎದಿರೇಟು

ಬೆಂಗಳೂರು, ನ. ೧೮- ಯತೀಂದ್ರ ಸಿದ್ದರಾಮಯ್ಯನವರ ಹಲೋ ಅಪ್ಪ ವಿಡಿಯೋದಲ್ಲಿ ಪ್ರಸ್ತಾಪವಾಗಿರುವ ವಿವೇಕಾನಂದ ಅವರು ಮೈಸೂರು ಗ್ರಾಮಾಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದಾರೆ. ಅವರ ಬಗ್ಗೆ ಮಾತನಾಡಲಾಗಿದೆಯೇ ಹೊರತು, ಕುಮಾರಸ್ವಾಮಿ ಅವರು ಹೇಳಿದಂತೆ ಪೊಲೀಸ್ ಅಧಿಕಾರಿ ವಿವೇಕಾನಂದರ ಬಗ್ಗೆ ಅಲ್ಲ. ಕುಮಾರಸ್ವಾಮಿ ಅವರು ಯಾವುದನ್ನೋ ಇನ್ಯಾವುದಕ್ಕೋ ತಳಕು ಹಾಕಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪೊಲೀಸ್ ಅಧಿಕಾರಿ ವಿವೇಕಾನಂದ ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ವರ್ಗಾವಣೆಯಾಗಿದ್ದಾರೆ. ಈ ಕ್ಷೇತ್ರದ ಶಾಸಕರಾಗಿರುವ ಹರೀಶ್‌ಗೌಡ ಅವರನ್ನು ಇವರು ಯಾರು ಎಂಬುದನ್ನು ಕುಮಾರಸ್ವಾಮಿ ಕೇಳಲಿ. ಯತೀಂದ್ರ ಅವರು ಮಾತನಾಡಿರುವುದು ವಿವೇಕಾನಂದರವರ ಬಗ್ಗೆ. ಹಾಗಾಗಿ ಸತ್ಯ ತಿಳಿದು ಮಾತನಾಡಿದರೆ ಒಳ್ಳೆಯದು ಎಂದು ಹೇಳಿದರು.
ಯತೀಂದ್ರರವರ ಸಂಭಾಷಣೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡಿದ್ದರೂ ಕುಮಾರಸ್ವಾಮಿ ಅವರು ಮತ್ತೊಂದು ಸುಳ್ಳನ್ನು ಸೃಷ್ಠಿಸಿ ಜನತೆಯ ದಾರಿ ತಪ್ಪಿಸಲು ಹೆಣಗಾಡುತ್ತಿದ್ದಾರೆ. ತನ್ನ ಸುಳ್ಳಿಗೆ ಸಾಕ್ಷಿ ನೀಡುವ ಹತಾಶ ಪ್ರಯತ್ನ ಮಾಡಿದ್ದಾರೆ. ಇದನ್ನು ಮಾನಸಿಕ ಅಸ್ವಸ್ಥತೆ ಎನ್ನದೆ ಬೇರೆ ಏನು ಹೇಳಲು ಸಾಧ್ಯ ಎಂದರು.
ಯತೀಂದ್ರ ವಿರುದ್ಧ ತಾನು ಮಾಡಿರುವುದು ಸುಳ್ಳು ಆರೋಪ ಎಂಬುದು ಕುಮಾರಸ್ವಾಮಿ ಅವರಿಗೆ ಖಂಡಿತ ಮನವರಿಕೆಯಾಗಿದೆ. ಈಗಲೂ ಕಾಲ ಮಿಂಚಿಲ್ಲ, ತಪ್ಪನ್ನು ಒಪ್ಪಿಕೊಂಡರೆ ಯಾರೂ ಸಣ್ಣವರಾಗುವುದಿಲ್ಲ. ತಪ್ಪನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆ ಕೇಳುವುದು ಉತ್ತಮ ನಡೆ. ಆ ಸದ್ಬುದ್ಧಿ ಅವರಿಗೆ ಬರಲಿ ಎಂದು ಹಾರೈಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರ ಜತೆ ನನಗೆ ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿವೆ. ಆದರೆ ಅವರು ಎಂದೂ ಈ ರೀತಿಯ ಸಡಿಲ ಮಾತುಗಳನ್ನು ಆಡಿಲ್ಲ. ಕುಮಾರಸ್ವಾಮಿ ಅವರು ಕನಿಷ್ಠ ಅವರ ಅಣ್ಣ ಹೆಚ್.ಡಿ. ರೇವಣ್ಣರವರಿಂದಾದರೂ ರಾಜಕೀಯ ನಡೆ ಕಲಿಯಬಾರದು ಎಂದು ಸಿದ್ದರಾಮಯ್ಯ ಅವರು ಕಿವಿಮಾತು ಹೇಳಿದ್ದಾರೆ.
ಮೈಸೂರಿನಲ್ಲಿ ಹೇಳಿಕೆ
ಮೈಸೂರಿನಲ್ಲೂ ಈ ಬಗ್ಗೆ ಇಂದು ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಎಂದಿಗೂ ತಾವು ಮಾಡಿರುವ ಆರೋಪಗಳನ್ನು ಸಾಬೀತು ಮಾಡಿಲ್ಲ. ದ್ವೇಷ ಹಾಗೂ ಅಸೂಯೆ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಹೊಟ್ಟೆ ಉರಿ, ಅಸೂಯೆ ಎಂದು ಪುನರುಚ್ಚರಿಸಿದರು.
ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ೩೮ ಸ್ಥಾನ ಗೆದ್ದಿದ್ದ ಜೆಡಿಎಸ್‌ನವರು ಈಗ ೧೯ ಸ್ಥಾನಕ್ಕೆ ಇಳಿದಿದ್ದಾರೆ. ಕುಮಾರಸ್ವಾಮಿಯವರ ಮಾಡುವ ಸುಳ್ಳು ಆರೋಪಗಳಿಗೆ ಉತ್ತರ ನೀಡುವ ಅಗತ್ಯ ತಮಗಿಲ್ಲ ಎಂದರು.
ವರ್ಗಾವಣೆಗೆ ಸಂಬಂಧಿಸಿದಂತೆ ಪೆನ್‌ಡ್ರೈವ್‌ನಲ್ಲಿದ್ದ ಮಾಹಿತಿಯನ್ನು ಬಹಿರಂಗಪಡಿಸದಂತೆ ಕಾಂಗ್ರೆಸ್‌ನ ಕೆಲ ಸಚಿವರು, ಶಾಸಕರು ನನಗೆ ಮನವಿ ಮಾಡಿದ್ದರು ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಪೆನ್‌ಡ್ರೈವ್ ಹೇಳಿಕೆ ನಂತರ ವಿಧಾನಸಭಾ ಅಧಿವೇಶನ ನಡೆಯಿತು. ಅಲ್ಲಿ ಕುಮಾರಸ್ವಾಮಿ ಇದನ್ನು ಏಕೆ ಪ್ರಸ್ತಾಪ ಮಾಡಲಿಲ್ಲ. ಪೆನ್‌ಡ್ರೈವ್ ಮಾಹಿತಿ ಬಹಿರಂಗಗೊಳಿಸದಂತೆ ಮನವಿ ಮಾಡಿದವರು ಯಾರು ಎಂಬುದನ್ನು ಹೇಳಲಿ. ವಿದ್ಯುತ್ ಕಳವು ಮಾಡಿರುವ ಕುಮಾರಸ್ವಾಮಿ ಅವರಿಗೆ ಈ ರೀತಿ ಮಾತನಾಡಲು ಯಾವ ನೈತಿಕತೆ ಇದೆ ಎಂದು ವಾಗ್ದಾಳಿ ನಡೆಸಿದರು.
ವಿದ್ಯುತ್ ಕಳವು ಮಾಡಿ ದಂಡ ಕಟ್ಟುವ ಮೂಲಕ ಮಾಡಿರುವ ಅಪರಾಧವನ್ನು ಅವರು ಒಪ್ಪಿಕೊಂಡಿದ್ದಾರೆ. ಅಪರಾಧ ಚಿಕ್ಕದಾದರೂ ಅಪರಾಧವೇ ಎಂದು ಅವರು ಹೇಳಿದರು.
ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ವಿರೋಧ ಪಕ್ಷದ ನಾಯಕ ಅಶೋಕ್ ಹೇಳಿರುವ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಈ ಆರೋಪಕ್ಕೆ ವಿಧಾನಸಭೆಯಲ್ಲಿ ಉತ್ತರ ಕೊಡುತ್ತೇನೆ. ರಾಜ್ಯದಲ್ಲಿ ದ್ವೇಷ ರಾಜಕಾರಣ ಮಾಡದೆ, ಶಾಂತಿಯುತ ವಾತಾವರಣವನ್ನು ಸರ್ಕಾರ ನಿರ್ಮಿಸುತ್ತಿದೆ. ನಮಗೆ ವಿರೋಧ ಪಕ್ಷದ ನಾಯಕ ಯಾರಾಗುತ್ತಾರೆ ಎಂಬುದು ಮುಖ್ಯವಲ್ಲ. ಜನರ ಆಶೀರ್ವಾದದಿಂದ ರಚನೆಯಾಗಿರುವ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುವುದಷ್ಟೇ ನಮ್ಮ ಆದ್ಯತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇಂದು ಚುನಾವಣೆ ನಡೆದರೆ ಬಿಜೆಪಿ ಅಧಿಕಾರಿಕ್ಕೆ ಬರಲಿದೆ ಎಂಬ ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪನವರ ಮಗ ವಿಜಯೇಂದ್ರರವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದು ಅವರ ಪಕ್ಷದ ಅನೇಕ ಮುಖಂಡರಲ್ಲಿ ಅಸಮಾಧಾನ ಮೂಡಿಸಿದೆ. ಇನ್ನು ಸ್ವಲ್ಪ ದಿನ ಕಾದು ನೋಡಿ ಬಿಜೆಪಿಯ ಪರಿಸ್ಥಿತಿ ಏನಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.