ಆರೋಪ ಸಾಬೀತುಪಡಿಸಲಿ: ಸಿದ್ದುಗೆ ಸಿಎಂ ಸವಾಲು

ಹುಬ್ಬಳ್ಳಿ, ಏ 25: ನನ್ನ ವಿರುದ್ಧ ಮಾಡಿರುವ ಆರೋಪಗಳ ಪೈಕಿ ಒಂದೇ ಒಂದು ಆರೋಪವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಸಾಬೀತು ಪಡಿಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.
ನಗರದ ಖಾಸಗಿ ಹೋಟೆಲ್‍ನಲ್ಲಿಂದು ತಂಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ಧರಾಮಯ್ಯ ನನ್ನ ವಿರುದ್ಧ ಸುಮ್ಮನೇ ಆರೋಪಗಳನ್ನು ಮಾಡುತ್ತಿದ್ದಾರೆ. ಅದು ಜನರಿಗೂ ಗೊತ್ತಿದೆ ಎಂದು ಖಡಕ್ಕಾಗಿ ನುಡಿದರು.
ಸಿದ್ದರಾಮಯ್ಯ ಮೇಲೆ ಸಾಕಷ್ಟು ಪ್ರಕರಣಗಳಿವೆ. ಅವರ ವಿರುದ್ಧ ಪ್ರಕರಣಗಳ ಕುರಿತು ಲೋಕಾಯುಕ್ತಕ್ಕೆ ತನಿಖೆಗೂ ನೀಡಲಾಗಿದೆ. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ. ಭ್ರಷ್ಟಾಚಾರ ಅಂದರೆ ಕಾಂಗ್ರೆಸ್ ಎಂದು ಅವರು ಕಟಕಿಯಾಡಿದರು.
ಕಾಂಗ್ರೆಸ್‍ನ ಎಷ್ಟು ಜನ ನಾಯಕರು ಜೈಲಿಗೆ ಹೋಗಿದ್ದಾರೆ. ಜಾಮೀನಿನ ಮೇಲೆ ಬಂದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಸಿಎಂ ಛೇಡಿಸಿದರು.
ಬಿಜೆಪಿಮಯ:
ಪ್ರಧಾನಿ ಮೋದಿ, ಅಮೀತ್ ಷಾ ಬಂದ ಮೇಲೆ ರಾಜ್ಯ ಸಂಪೂರ್ಣ ಬಿಜೆಪಿಮಯ ಆಗುವುದರಲ್ಲಿ ಸಂಶಯವಿಲ್ಲ ಎಂದ ಅವರು ಚುನಾವಣಾ ವಿಷಯವಾಗಿ ಷಾ ಅವರು ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಪ್ರಧಾನಿ ಹಾಗೂ ಪ್ರಮುಖರ ಕಾರ್ಯಕ್ರಮಗಳ ಮರು ಅವಲೋಕನ ಮಾಡಲು ಹೇಳಿದ್ದಾರೆ. ಅದನ್ನು ಇಂದು ರಾತ್ರಿ ನಡೆಸಲಾಗುವುದು ಎಂದು ತಿಳಿಸಿದರು.
ಜಯವಾಹಿನಿ ರೋಡ್ ಶೋ ಕಾರ್ಯಕ್ರಮಕ್ಕೆ ಜನಬೆಂಬಲ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಲೆ ಇದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಬೊಮ್ಮಾಯಿ ಹೇಳಿದರು.