ಆರೋಪ ಪ್ರತ್ಯಾರೋಪ ನಿಲ್ಲಿಸಿ:ಖಂಡ್ರೆ:ಖೂಬಾಗೆ ಮನವಿ

ಭಾಲ್ಕಿ:ಮಾ.14: ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಮತ್ತು ಕೇಂದ್ರದ ಸಚಿವ ಭಗವಂತ ಖೂಬಾ ಅವರ ನಡುವೆ ನಡೆಯುತ್ತಿರುವ ಆರೋಪ ಮತ್ತು ಪ್ರತ್ಯಾರೋಪ ಜನರಿಗೆ ಮನರಂಜನೆ ನೀಡುತ್ತಿವೆ ಹೊರತು ಇದರಿಂದ ಯಾವುದೇ ಪ್ರಯೋಜನೆ ಆಗುತ್ತಿಲ್ಲ. ಸಕಾರಾತ್ಮಕ ಟೀಕೆ ಟಿಪ್ಪಣೆಗಳಿಗೆ ಜನ ಸ್ವೀಕಾರ ಮಾಡುತ್ತಾರೆ. ಹಾಗಾಗಿ ಇಂತಹ ನಕಾರಾತ್ಮಕ ಹೇಳಿಕೆಗಳಿಗೆ ಜನ ಕಿವಿಗೂಡುವುದಿಲ್ಲ ಇದು ಇಲ್ಲಿಗೆ ನಿಲ್ಲಿಸಬೇಕು ಎಂದು ಜೆ.ಎಚ್.ಪಟೇಲ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಶಾಂತಯ್ಯ ಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಪ್ರತಿಕಾ ಪ್ರಕಟಣೆ ಹೊರಡಿಸಿರುವ ಅವರು, ದೇಶದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಮೊದಲ ಬಾರಿಗೆ ಕೇಂದ್ರದ ಸಚಿವ ಸ್ಥಾನ ಲಭಿಸಿದ್ದು ಹೆಮ್ಮೆಯ ಸಂಗತಿ. ಅದರಲ್ಲಿ ಲಿಂಗಾಯತ ಸಮುದಾಯದ ಖೂಬಾ ಮಂತ್ರಿ ಆಗಿರುವುದರಿಂದ ಜಿಲ್ಲೆಯ ಅಭಿವೃದ್ಧಿ ವೇಗ ಹೆಚ್ಚಲಿದೆ ಎಂದು ಜನರು ಭಾವಿಸಿದ್ದರು.

ಆದರೆ, ಪದೇಪದೇ ಜಿಲ್ಲೆಯ ಇಬ್ಬರು ಪ್ರಭಾವಿ ಲಿಂಗಾಯತ ಸಮುದಾಯದ ನಾಯಕರು ಆರೋಪ, ಪ್ರತ್ಯಾರೋಪ ಮಾಡುತ್ತ ಹೇಳಿಕೆ ನೀಡುತ್ತಿರುವುದು ಬೇಸರ ತರಿಸಿದೆ.

ಸ್ಥಳೀಯ ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ ಅವರ ಮಾತು ಕೇಳಿಕೊಂಡು ಖೂಬಾ ಅವರು ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಭಾಲ್ಕಿಯಲ್ಲಿ ಇಚೆಗೆ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಟ್ಟಣದಲ್ಲಿ ಒಂದು ಕ್ರೀಡಾಂಗಣ ಮಾಡಲು ಶಾಸಕರಿಗೆ ಯೋಗ್ಯತೆ ಇಲ್ಲವೆಂದು ಹೇಳಿಕೆ ನೀಡಿದ್ದೀರಿ.

ಕ್ರೀಡಾಂಗಣ ನಿರ್ಮಾಣಕ್ಕೆ ನಾನೇ ಸ್ವತಹ ಶಾಸಕರ ಮೇಲೆ ಒತ್ತಡ ತಂದಿದ್ದೇನೆ. ಆದರೆ, ರಾಜ್ಯದಲ್ಲಿ ಸರಕಾರ ಬದಲಾವಣೆಯಾಗಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನನೆಗುದಿಗೆ ಬಿದ್ದಿದೆ. ಈ ಹಿಂದೆ ದಿವಂಗತ ವಿಜಯಕುಮಾರ ಖಂಡ್ರೆ ಶಾಸಕರಿದ್ದ ಸಂದರ್ಭದಲ್ಲಿ ಅಂತರ ರಾಷ್ಟ್ರೀಯ ವಾಲಿಬಾಲ್ ಟೂರ್ನಮೆಂಟ್ ಏರ್ಪಡಿಸಲಾಗಿತ್ತು. ಅದೇ ರೀತಿ 2004ರಲ್ಲಿ ಜೆ.ಎಚ್.ಪಟೇಲ್ ಸ್ಮರಣಾರ್ಥ ಅಂತರ ರಾಜ್ಯ ವಾಲಿಬಾಲ್ ಏರ್ಪಡಿಸಿದ್ದು ಇತಿಹಾಸ. ಮುಂಬರುವ ದಿನಗಳಲ್ಲಿ ಮತ್ತೆ ಕ್ರೀಡಾಕೂಟ ಏರ್ಪಡಿಸುತ್ತೇವೆ. ತಾವು 2010ರ ನಂತರ ರಾಜಕೀಯ ಪ್ರವೇಶ ಮಾಡಿದ್ದೀರಿ. ತಮಗೆ ಹಿಂದಿನ ಇತಿಹಾಸ ಗೊತ್ತಿಲ್ಲ ಎಂದು ಖೂಬಾಗೆ ತಿಳಿಸಿದ್ದಾರೆ.