ಆರೋಪಿ ಗಲ್ಲುಶಿಕ್ಷೆಗೆ ಪಾಲಕರ ಪಟ್ಟು. ಪೊಲೀಸ್, ಮುಖಂಡರ ಮನವೊಲಿಕೆ, ಕೊನೆಗೂ ನೆರವೇರಿದ ಯುವತಿಯ ಅಂತ್ಯಸಂಸ್ಕಾರ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜು. 23 :- ಪಾಗಲ್ ಪ್ರೇಮಿಯಿಂದ ಭೀಕರವಾಗಿ ಗುರುವಾರ ಕೊಲೆಯಾಗಿದ್ದ ಯುವತಿ ನಿರ್ಮಲಾಳ ಶವಸಂಸ್ಕಾರಕ್ಕೆ ಆಕೆಯ ಪಾಲಕರು ಹಾಗೂ ಸಂಬಂಧಿಕರು ಆರೋಪಿಗೆ ಗಲ್ಲುಶಿಕ್ಷೆ ಆಗುವವರೆಗೂ ಕೊಲೆಯಾದ ಯುವತಿಯ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಶುಕ್ರವಾರ ಮಧ್ಯಾಹ್ನ 1 ಗಂಟೆಯವರೆಗೂ ನಿರಾಕರಿಸಿ ಪಟ್ಟುಹಿಡಿದಿದ್ದು , ನಂತರ ಗ್ರಾಮಸ್ಥರು ಹಾಗೂ ಪೊಲೀಸರ ಮನವೊಲಿಕೆಯಿಂದ ಪಾಲಕರು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಅಂತ್ಯಸಂಸ್ಕಾರ ನೆರವೇರಿಸಿದರು.
ಕೊಲೆ ಮಾಡಿದ ಆರೋಪಿ ಭೋಜರಾಜನಿಗೆ ಗಲ್ಲು ಶಿಕ್ಷೆಯಾಗಲಿ, ನಂತರ ನಾವು ಶವಸಂಸ್ಕಾರ ಮಾಡುತ್ತೇವೆ ಎಂದು ಯುವತಿ ನಿರ್ಮಲಾ ಸಂಬಂಧಿಕರು ಅಂತ್ಯಸಂಸ್ಕಾರ ನೆರವೇರಿಸಲು ಗುರುವಾರ ರಾತ್ರಿ 10 ಗಂಟೆಯಿಂದ ಶುಕ್ರವಾರ ಮಧ್ಯಾಹ್ನ 1 ಗಂಟೆಯವರೆಗೆ ನಿರಾಕರಿಸಿ ಪಟ್ಟು ಹಿಡಿದಿದ್ದರು.
ಕೊಲೆಯಾದ ಯುವತಿ ಶವಕಾದ ಪೊಲೀಸರು : ಗ್ರಾಮದ ಮುಖಂಡರು ಗುರುವಾರ ರಾತ್ರಿಯೇ ಯುವತಿಯ ಶವವನ್ನು ಗ್ರಾಮದ ಹೊರವಲಯದಲ್ಲಿ ಇರಿಸಿದ್ದು, ಕೊಲೆ ಆರೋಪಿಗೆ ಗಲ್ಲುಶಿಕ್ಷೆ ವಿಧಿಸುವವರೆಗೂ ಕೊಲೆಯಾದ ಯುವತಿಯ ಶವಸಂಸ್ಕಾರ ಮಾಡುವುದಿಲ್ಲವೆಂದು ಯುವತಿ ಪಾಲಕರು ಪಟ್ಟು ಹಿಡಿದಿದ್ದರಿಂದ ರಾತ್ರಿಪೂರಾ ಅನಾಥವಾಗಿದ್ದ ಶವವನ್ನು ಪೊಲೀಸರೇ ಕಾಯುವಂತಾಯಿತು. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ಮೂಡಿದ್ದರಿಂದ ಪೊಲೀಸರು ಹಾಗೂ ಗ್ರಾಮಸ್ಥರಿಗೆ ತಲೆನೋವಾಗಿ ಪರಿಣಮಿಸಿತ್ತು ಇದನ್ನು ಮನಗಂಡ ಗ್ರಾಮಸ್ಥರು ನಿನ್ನೆ ಬೆಳಗ್ಗೆಯಿಂದ ಕನ್ನಿಬೋರಯ್ಯನಹಟ್ಟಿ, ಪೂಜಾರಹಳ್ಳಿ, ಜುಮ್ಮೋಬನಹಳ್ಳಿ, ಕಾತ್ರಿಕೆಹಟ್ಟಿ ಸೇರಿ ಅನೇಕ ಹಳ್ಳಿಗಳ ಮುಖಂಡರು ಹಾಗೂ ಸಂಬಂಧಿಕರು, ಯುವತಿಯ ಶವಸಂಸ್ಕಾರ ನೆರವೇರಿಸುವಂತೆ ಮನವೊಲಿಕೆ ಪ್ರಯತ್ನಗಳು ಮಧ್ಯಾಹ್ನ 1 ಗಂಟೆಯವರೆಗೆ ನಡೆಸಿದರು.
ಕೊನೆಗೆ, ಕನ್ನಿಬೋರಯ್ಯನಹಟ್ಟಿಯ ಮಹಿಳೆಯರು ಸೇರಿ ಇಡೀ ಗ್ರಾಮಸ್ಥರು, ಯುವತಿಯ ಕೊಲೆ ಆರೋಪಿ ಭೋಜರಾಜನಿಗೆ ಗಲ್ಲು ಶಿಕ್ಷೆಯಾಗುವಂತೆ ಕಾನೂನು ಕ್ರಮ ಕೈಗೊಳ್ಳಬೇಕು, ಕೊಲೆಯಾದ ಯುವತಿಯ ಕುಟುಂಬಕ್ಕೆ ರಕ್ಷಣೆ ನೀಡಬೇಕು, ಕೊಲೆ ಆರೋಪಿಯ ತಂದೆಯ ವಿರುದ್ಧ ಕೇಸ್ ದಾಖಲಿಸಿ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕೆಂದು ಪೊಲೀಸರಿಗೆ ಒತ್ತಾಯಿಸಿದರು. ಸೂಕ್ತ ರಕ್ಷಣೆ ಹಾಗೂ ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನು ಪೊಲೀಸರು ನೀಡಿದ ನಂತರ ಪರಿಸ್ಥಿತಿ ತಿಳಿಯಾಗಿದ್ದು, ಕೊಲೆಯಾದ ನಿರ್ಮಲಾ ಅವರ ಶವವನ್ನು ನಿನ್ನೆ ಮಧ್ಯಾಹ್ನ 2 ಗಂಟೆಗೆ ಗ್ರಾಮದ ಹೊರವಲಯದ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಸುಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಮೌಳಿ, ಜಿ.ಓಬಣ್ಣ, ಹುಡೇಂ ಪಾಪನಾಯಕ, ಶರಣಪ್ಪ, ಪೂಜಾರಹಳ್ಳಿ ಬಸಣ್ಣ, ದಾಸಣ್ಣ, ಬಸವರಾಜ, ಪರಮೇಶ್ ಸೇರಿ ಗ್ರಾಪಂ ಸದಸ್ಯರು ಹಾಗೂ ಕೂಡ್ಲಿಗಿ ಸಿಪಿಐ ವಸಂತ ವಿ.ಅಸೋದೆ, ಪಿಎಸ್ಐಗಳಾದ ತಿಮ್ಮಣ್ಣ ಚಾಮನೂರು, ನಾಗರತ್ನಮ್ಮ, ಧನಂಜಯ, ಸರಳಾ, ಹನುಮಂತಪ್ಪ ತಳವಾರ, ನಾರಾಯಣ, ಪೇದೆಗಳಾದ ಜಗದೀಶ್, ರವಿಗೌಡ, ಉಜ್ಜಿನಿ ರೇವಣ್ಣ, ರಾಮಾಂಜಿನಿ, ಮಹಾಲಕ್ಷ್ಮಿ ಸೇರಿ ಪೊಲೀಸ್ ಸಿಬ್ಬಂದಿ ಹಾಗೂ ಗ್ರಾಮದ ಅನೇಕರು ಇದ್ದರು.