ಆರೋಪಿಯ ಬಂಧನಕ್ಕೆ ರಾಮಚಂದ್ರು ಒತ್ತಾಯ

ಸಂಜೆವಾಣಿ ನ್ಯೂಸ್
ಮೈಸೂರು: ಜೂ.11:- ವಿಡಿಯೋ ಬಹಿರಂಗಪಡಿಸುವಾಗಿ ಬ್ಲಾಕ್‍ಮೇಲ್ ಮಾಡಿ ಅಮಾಯಕರೊಬ್ಬರ ಸಾವಿಗೆ ಕಾರಣವಾಗಿರುವ ಆರೋಪಿಯನ್ನು ತಕ್ಷಣವೇ ಬಂಧಿಸದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಸಂಘದ ಅಧ್ಯಕ್ಷ ಎಂ.ರಾಮಚಂದ್ರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚಂದಗಾಲು ಗ್ರಾಮದ ನಿವಾಸಿ ಮಹದೇವನಾಯಕ ಅವರ ಆತ್ಮಹತ್ಯೆ ಮತ್ತು ಅವರ ಕುಟುಂಬದವರ ಆತ್ಮಹತ್ಯೆ ಯತ್ನಕ್ಕೆ ನೇರವಾಗಿ ಆರೋಪಿ ಚೀರನಹಳ್ಳಿ ಗ್ರಾಮದ ಲೋಕೇಶ್‍ನನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿಡಿಯೋ ಬಹಿರಂಗಪಡಿಸಿ ಅಪಮಾನ ಮಾಡುವ ಜತೆಗೆ ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ಕುಟುಂಬದವರು ಪೆÇಲೀಸ್ ಠಾಣೆಗೆ ದೂರು ನೀಡಲು ಮುಂದಾದರೂ ದೂರು ಸ್ವೀಕರಿಸದೆ ಇರುವುದು ಸರಿಯಲ್ಲ. ಪೆÇಲೀಸ್ ಅಧಿಕಾರಿಗಳು ಆರೋಪಿಗಳೊಂದಿಗೆ ಶಾಮೀಲಾಗಿ ನೊಂದ ಕುಟುಂಬಕ್ಕೆ ರಕ್ಷಣೆ ಕೊಡಲು ವಿಫಲವಾದ ಪರಿಣಾಮ ಸಂಬಂಧಿಸಿದ ಸರ್ಕಲ್ ಇನ್‍ಸ್ಪೆಕ್ಟರ್, ಸಬ್ ಇನ್‍ಸ್ಪೆಕ್ಟರ್‍ರನ್ನು ಅಮಾನತುಪಡಿಸಬೇಕು. ಆರೋಪಿಯ ರಕ್ಷಣೆಗೆ ನಿಂತಿರುವವರ ಮೇಲೂ ಕ್ರಮಜರುಗಿಸಬೇಕು ಎಂದು ಹೇಳಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಿತ ಕಾಯುತ್ತೇವೆಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಒಂದು ಕುಟುಂಬಕ್ಕೆ ಇಂತಹ ಅನ್ಯಾಯವಾಗಿರುವುದು ಅನ್ಯಾಯ. ಕೂಡಲೇ ಆರೋಪಿ ವಿರುದ್ಧ ಅಟ್ರಾಸಿಟಿ, ಕೊಲೆ ಮೊಕದ್ದಮೆ ದೂರು ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು.
ಮೃತ ಮಹದೇವನಾಯಕ ಕುಟುಂಬಕ್ಕೆ ಸರ್ಕಾರ ಹತ್ತು ಲಕ್ಷ ರೂ.ಪರಿಹಾರ ಕೊಡುವ ಜತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಮುಂದಾಗದೆ ಇದ್ದಲ್ಲಿ ಎರಡೂ ಜಿಲ್ಲೆಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರ ಆರೋಗ್ಯ ವಿಚಾರಿಸಿದರು.