
ಯಾದಗಿರಿ : ಆ. 02: ಮಹಿಳೆಯರ ಮೇಲೆ ಹಲ್ಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಹಾಪೂರ ಹೆಚ್ಚುವರಿ ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಶ್ರೀ ಬಸವರಾಜ ಅವರು ಎಂಟು ಆರೋಪಿಗಳಿಗೆ ತಲಾ 5500 ರಂತೆ ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದ್ದಾರೆ ಎಂದು ಶಹಾಪೂರ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀ ವಿನಾಯಕ ಎಸ್.ಕೋಡ್ಲಾ ಅವರು ತಿಳಿಸಿದ್ದಾರೆ.
ಶಹಾಪೂರ ತಾಲ್ಲೂಕಿನ ವಡಗೇರಾ ಪೊಲೀಸ್ ಠಾಣೆ ಹದ್ದಿಯ ಗುರುಸುಣಗಿ ಗ್ರಾಮದಲ್ಲಿ 2014 ಜನವರಿ 4 ರಂದು ಗುರಸಣಿ ಗ್ರಾಮದ ಶರಣಮ್ಮ ಎನ್ನುವವರ ಮೇಲೆ ಅದೇ ಗ್ರಾಮದ ಮಲ್ಲಿಕಾರ್ಜುನ ತಂದೆ ದೊಡ್ಡ ಮರೆಪ್ಪ ಅಬ್ಸಿಹಾಳ, ಮರೆಪ್ಪ ತಂದೆ ಚನ್ನಬಸಪ್ಪ ಬಸಂಪೂರ, ಬಸವರಾಜ ತಂದೆ ದೇವೇಂದ್ರಪ್ಪ ಕಿರದಾಳ್ಳದವರ, ಭೀಮರಾಯ ತಂದೆ ಮರೆಪ್ಪ ಅಬ್ಸಿಹಾಳ, ದಂಡಪ್ಪ ತಂದೆ ಸಿದ್ದಪ್ಪ ಕಿರಿಯಾಳದವರ, ಪರಶುರಾಮ ತಂದೆ ಸಿದ್ದಣ್ಣ ಅಬ್ಸಿಹಾಳ, ಸಿದ್ದಲಿಂಗಮ್ಮ ಗಂಡ ಮಲ್ಲಿಕಾರ್ಜುನ ಅಬ್ಸಿಹಾಳ, ಸಾಬಣ್ಣ ತಂದೆ ಸಿದ್ದಪ್ಪ ತಳವಾರ ಎಲ್ಲರೂ ಸಾ.ಗುರುಸುಣಗಿ ಅಕ್ರಮಕೂಟ ರಚಿಸಿಕೊಂಡು ಫಿರ್ಯಾದಿ ಹಾಗೂ ಸಾಕ್ಷಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ, ಬಡಿಗೆಯಿಂದ, ಹಾಗೂ ಚಪ್ಪಲಿಗಳಿಂದ ಹೊಡೆದು ಗಾಯಗಳನ್ನು ಮಾಡಿದ್ದಾರೆಂದು ಆರೋಪಿತರಿಗೆ ಕಲಂ 143, 147,148, 323, 324, 355, 504, 506, ಸಂ 149 ಐಪಿಸಿ ಅಡಿಯಲ್ಲಿ ಅಪರಾಧ ರುಜುವಾತು ಆಗಿದೆ ಎಂದು ಪ್ರತಿ ಅಪರಾಧಿಗಳಿಗೆ ತಲಾ 5,500 ರೂ.ದಂಡ (ಒಟ್ಟು ರೂ.44,000) ವಿಧಿಸಿರುತ್ತಾರೆ.
ಫಿರ್ಯಾದಿದಾರ ಪರವಾಗಿ ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀ ವಿನಾಯಕ ಎಸ್.ಕೋಡ್ಲಾ ವಾದ ಮಂಡಿಸಿದ್ದರು. ವಡಗೇರಾ ಪೊಲೀಸ್ ಠಾಣೆಯ ಅಂದಿನ ಪಿಎಸ್‍ಐ ಮಲ್ಲಿಕಾರ್ಜುನ ಇಕ್ಕಳಕಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಈ ಪ್ರಕರಣದ ತೀರ್ಪು ನೀಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.