ಆರೋಪಿಗಳ ವಿರುದ್ಧ ಕಠಿಣ ಕ್ರಮ:ಮೋದಿ ಭರವಸೆ

ನವದೆಹಲಿ,ಜು.೨೦:ಮಣಿಪುರದಲ್ಲಿ ನಡೆದಿರುವ ವ್ಯಾಪಕ ಹಿಂಸಾಚಾರ ಹಾಗೂ ಮಹಿಳೆಯರಿಬ್ಬರ ಬೆತ್ತಲೆ ಮೆರವಣಿಗೆ ಬಗ್ಗೆ ಕಡೆಗೂ ಮೌನ ಮುರಿದಿರುವ ಪ್ರಧಾನಮಂತ್ರಿ ನರೇಂದ್ರಮೋದಿ ಅವರು, ಇದು ೧೪೦ ಕೋಟಿ ಭಾರತೀಯರು ನಾಚಿಕೆಪಡಬೇಕಾದ ಸಂಗತಿ ಎಂದು ಹೇಳಿದ್ದಾರೆ.
ಈ ಘಟನೆ ಕೇಳಿ ನನ್ನ ಹೃದಯಕ್ಕೆ ತುಂಬ ನೋವಾಗಿದ್ದು, ಸಿಟ್ಟಿನಿಂದ ಕುದಿಯುತ್ತಿದೆ. ನಮ್ಮ ಮುಂದೆ ಬಂದಿರುವ ಮಣಿಪುರದ ಘಟನೆ ಸುಸಂಸ್ಕೃತ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದರು.
ಆಯಾ ರಾಜ್ಯಗಳು ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕೆಂದು ಒತ್ತಾಯಿಸಿದರು.
ವಿಶೇಷವಾಗಿ ಮಹಿಳೆಯರ ಸುರಕ್ಷತೆಗಾಗಿ ಮತ್ತು ಇನ್ನಷ್ಟು ಕಠಿಣಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಅದು ರಾಜಸ್ತಾನ ಅಥವಾ ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ಘಟನೆಯಾಗಿರಲಿ ರಾಜಕೀಯದಿಂದ ಹೊರ ಬಂದು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಮುಂದಾಗಬೇಕು ಎಂದು ತಿಳಿಸಿದರು.
ಇಂದಿನಿಂದ ಆರಂಭವಾಗಿರುವ ಮುಂಗಾರು ಸಂಸತ್ ಅಧಿವೇಶನಕ್ಕೆ ಎಲ್ಲ ಪಕ್ಷದ ಸದಸ್ಯರು ಸುಗಮ ಕಲಾಪಕ್ಕೆ ಅನುವು ಮಾಡಿಕೊಟ್ಟು ಸಹಕರಿಸಬೇಕು. ದೇಶದ ಹಿತಾಸಕ್ತಿಗೆ ಪೂರಕವಾದ ಚರ್ಚೆಗಳಲ್ಲಿ ತೊಡಗಿ ಮಸೂದೆ ಅಂಗೀಕರಿಸಲು ಸಹಕರಿಸುವಂತೆ ಮೋದಿ ಅವರು ಮನವಿ ಮಾಡಿದರು.