ಆರೋಪಿಗಳ ಬಂಧನಕ್ಕೆ ಆಗ್ರಹ


ಧಾರವಾಡ,ಎ.3:ರೈತ ನಾಯಕ ರಾಕೇಶ ಟಿಕಾಯತ್ ಮೇಲೆ ದಾಳಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತ, ದಲಿತ, ಅಲ್ಪಸಂಖ್ಯಾತ, ಪ್ರಗತಿಪರ ಸಂಘಟನೆಗಳ ಒಕ್ಕೂಟದವರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಅರ್ಪಿಸಿದರು.
ಕೇಂದ್ರ ಸರಕಾರವು ಜಾರಿಗೆ ತಂದಿರುವ ರೈತ ವಿರೋಧಿ ಮೂರು ಕರಾಳ ಕೃಷಿ ಕಾಯ್ದೆಗಳ ವಿರುದ್ಧ ದೇಶದಾದ್ಯಂತ ಪ್ರಬಲ ಹೋರಾಟ ನಡೆಸುತ್ತಿದ್ದಾರೆ. ಸರಕಾರ ಬಂಡವಾಳಶಾಹಿ ಉದ್ಯಮಿಗಳ ಲಾಭಕ್ಕಾಗಿ ರೈತರನ್ನು ಬಲಿಕೊಡುತ್ತಿದ್ದು, ಇದರ ವಿರುದ್ಧ ಸುದೀರ್ಘ ಹೋರಾಟಕ್ಕೆ ದೇಶದ ರೈತರು ಸಜ್ಜಾಗಿದ್ದಾರೆ ಎಂದು ಒಕ್ಕೂಟ ಹೇಳಿದೆ.
ರೈತ ಜಾಗೃತಿಗಾಗಿ ನಿನ್ನೆ ರಾಷ್ಟ್ರೀಯ ರೈತ ನಾಯಕರಾದ ರಾಕೇಶ ಟಿಕಾಯತ ಅವರು ರಾಜಸ್ತಾನದ ಪ್ರವಾಸದಲ್ಲಿದ್ದರು. ಈ ಸಂದರ್ಭದಲ್ಲಿ ರಾಜಸ್ತಾನದ ಆಲ್ವಾರ ಜಿಲ್ಲೆಯ ತರ್ತಾಪುರ ಎಂಬಲ್ಲಿ ಕೆಲವರು ಅವರ ವಾಹನದ ಮೇಲೆ ದಾಳಿ ಮಾಡಿದ್ದಾರೆ. ಟಿಕಾಯತ ವಾಹನದ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳ ಕಾರನ್ನು ಪೆÇಲೀಸರು ವಶಪಡಿಸಿಕೊಂಡಿದ್ದು, ಆ ಕಾರು ಬಿಜೆಪಿಯ ಕೆಲವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ದಾಳಿಯ ಹಿಂದೆ ಬಿಜೆಪಿ ಪಡೆ ಇದೆ ಎಂಬುದು ಸ್ಪಷ್ಟವಾಗಿದೆ ಎಂದು ಮನವಿಯಲ್ಲಿ ಹೇಳಿದ್ದಾರೆ.
ಇಂಥ ದಾಳಿಗಳು ಪ್ರಜಾತಂತ್ರ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತವೆ. ಜನರ ಹೋರಾಟದ ಹಕ್ಕನ್ನು ಧಮನ ಮಾಡುತ್ತವೆ. ಅದಕ್ಕಾಗಿ ಘಟನೆಗೆ ಕಾರಣರಾದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಒಕ್ಕೂಟದ ಕಾರ್ಯಕರ್ತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಾ.ವೆಂಕನಗೌಡ ಪಾಟೀಲ, ಲಕ್ಷ್ಮಣ ಬಕಾಯಿ, ಶಾರದಾ ಗೋಪಾಲ ದಾಬಡೆ ಇನ್ನಿತರರು ಭಾಗವಹಿಸಿದ್ದರು.