(ಸಂಜೆವಾಣಿ ನ್ಯೂಸ್)
ಹುಬ್ಬಳ್ಳಿ, ಜು 11: ಹಿರೇಕೋಡಿಯ ಜೈನಮುನಿ ಹತ್ಯೆ ಮಾಡಿದವರಿಗೆ ಜಾಮೀನು ಕೊಡಬಾರದು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾದರಿಯಲ್ಲೇ ಶಿಕ್ಷೆಯಾಗಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಒತ್ತಾಯಿಸಿದ್ದಾರೆ.
ವರೂರಿನ ನವಗ್ರಹತೀರ್ಥ ಕ್ಷೇತ್ರಕ್ಕೆ ಭೇಟಿ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಹಿಂಸಾವಾದಿಗಳ ಹತ್ಯೆ ಮಾಡಲಾಗಿದ್ದು, ಆರೋಪಿಗಳ ದುಡ್ಡಿಗೆ ಆಸೆಪಟ್ಟರೆ ಈ ಕ್ರೌರ್ಯಕ್ಕೆ ಸಾಥ್ ನೀಡಿದಂತಾಗುತ್ತದೆ ಎಂದ ಅವರು, ಆರೋಪಿಗಳ ಪರವಹಿಸದಂತೆ ವಕೀಲರ ಸಂಘಕ್ಕೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಕೇವಲ 6 ಲಕ್ಷ ಪಡೆದಿದ್ದಕ್ಕೆ ಕೊಲೆಯಾಗಿದೆ ಎಂದು ದಿಕ್ಕು ತಪ್ಪಿಸಲಾಗುತ್ತಿದೆ. ಸತ್ಯ ಏನೆಂಬುದು ತನಿಖೆಯಿಂದ ಹೊರಬೀಳಬೇಕು ಎಂದ ಅವರು, ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಬಿಜೆಪಿ ಯವರು ಹೇಳುತ್ತಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಸಿಬಿಐಗೆ ಒಪ್ಪಿಸಿದ ಪ್ರಕರಣಗಳು ಏನಾದವು? ಎಂದು ಪ್ರಶ್ನಿಸಿದರು.
ಮೂರು ಪಕ್ಷದವರೂ ಯಾವುದೇ ಮಾತನಾಡದೇ ಇರಿ. ತನಿಖೆಗೆ ಮುಕ್ತ ಅವಕಾಶ ಕೊಡಿ. ಪೊಲೀಸರು ತನಿಖೆ ನಡೆಸಲಿ ಎಂದರು.
ನಮ್ಮ ವ್ಯವಸ್ಥೆ ತೀರ ದುರ್ಬಲವಾಗಿದ್ದು ಒಂದೇ ವರ್ಷದಲ್ಲಿ ಅಪರಾಧಿಗಳು ಜಾಮೀನು ಪಡೆದು ಹೊರಬರುವಂತಿದೆ ಎಂದ ಅವರು, ಅಪರಾಧಿಗಳಿಗೆ ಉತ್ತರ ಪ್ರದೇಶದ ಮಾದರಿಯಲ್ಲೇ ಶಿಕ್ಷೆಯಾಗಬೇಕು. ಬುಲ್ಡೋಜರ್ ಮೂಲಕ ಮನೆ ಬೀಳಿಸಿ ಅವರ ಆಸ್ತಿ ಪಾಸ್ತಿ ಜಪ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ವಿಧಾನಸಭೆಯಲ್ಲಿ ನಮಾಜ್ ಮಾಡಲು ಅವಕಾಶ ಕೊಡುವಂತೆ ಕೋರಲಾಗುತ್ತಿರುವ ಪ್ರಶ್ನೆಗೆ ಉತ್ತರಿಸುತ್ತ, ವಿಧಾನಸಭೆಯು ಪ್ರಜಾಪ್ರಭುತ್ವದ ದೇಗುಲವಾಗಿದ್ದು ಈ ರೀತಿ ಮನವಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.