ಆರೋಗ್ಯ-ಸ್ವಚ್ಚತೆ-ನೈರ್ಮಲ್ಯಕ್ಕೆ ಅವಿನಾಭಾವ ಸಂಬಂಧ: ದಿನೇಶ್ ಗುಂಡೂರಾವ್

ಸಂಜೆವಾಣಿ ನ್ಯೂಸ್
ಮೈಸೂರು: ಫೆ.07:- ಆರೋಗ್ಯ ಸೇವಾ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಗಾಗಿ ಪ್ರಶಸ್ತಿ ಸ್ವೀಕರಿಸುತ್ತಿರುವ ತಮ್ಮೆಲ್ಲರ ಸೇವಾ ಮನೋಭಾವ ಮುಂದಿನ ದಿನಗಳಲ್ಲಿ ಪ್ರಶಸ್ತಿ ಪಡೆಯಬೇಕೆಂಬುವವರಿಗೆ ಪ್ರೇರಣೆಯಾಗಲಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಜೆ.ಕೆ.ಮೈದಾನ ಪ್ಲಾಟಿನಮ್ ಜ್ಯುಬಿಲಿ ಹಾಲ್‍ನಲ್ಲಿ ನಡೆದ ಸರ್ಕಾರಿ ಆಸ್ಪತ್ರೆಗಳ ಸ್ವಚ್ಚತೆ, ಶುಚಿತ್ವ ಮತ್ತು ನೈರ್ಮಲ್ಯಕ್ಕಾಗಿ ನೀಡಲಾಗುವ ರಾಜ್ಯ ಮಟ್ಟದ ಕಾಯಕಲ್ಪ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮಾಡಿ ಅವರು ಮಾತನಾಡಿದರು.
ನಮ್ಮ ಮನೆ ಕಚೇರಿಗಳನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳುತ್ತೇವೆಯೋ ಹಾಗೆ ನಾವು ಸೇವೆ ಒದಗಿಸುವ ಆಸ್ಪತ್ರೆಗಳನ್ನು ಜನಸ್ನೇಹಿಯಾಗಿಡುವ ಮೂಲಕ ಇಲಾಖೆಯನ್ನು ರಾಷ್ಟ್ರಮಟ್ಟದಲ್ಲಿ ಮಂಚೂಣಿಗೆ ಬರುವಂತೆ ನೋಡಿಕೊಳ್ಳೋಣ ಎಂದರು.
ವಿವಿಧ ಮಾನದಂಡಗಳಡಿ ಆಸ್ಪತ್ರೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಶೇ,70ಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುವ ಆಸ್ಪತ್ರೆಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಆರೋಗ್ಯ ಇಲಾಖೆಯಡಿ ಬರುವ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸ್ವಚ್ಚತೆ ಹಾಗೂ ನೈರ್ಮಲ್ಯದ ಕಡೆಗೆ ವಿಶೇಷ ಕಾಳಜಿವಹಿಸಿ ಆರೋಗ್ಯ ಕೇಂದ್ರಗಳಲ್ಲಿ ಸೇವೆ ನೀಡುವುದನ್ನೂ ಪರಿಗಣಿಸಲಾಗುತ್ತದೆ ಎಂದರು.
ಮೈಸೂರು ಅಭಿವೃದ್ಧಿ ಕ್ಷೀಣ:
ಮೈಸೂರಿನ ಆಸ್ಪತ್ರೆಗಳ ಗುಣಮಟ್ಟ ತುಂಬಾ ಹಿಂದಿರುವುದು ಕಂಡುಬoದಿದ್ದು ಶೇ.10ರಷ್ಟು ಆಸ್ಪತ್ರೆಗಳು ಮಾತ್ರ 75 ಶೇಕಡಾ ಅಂಕ ಪಡೆದಿವೆ. ಇದು ಮುಖ್ಯ ಮಂತ್ರಿಗಳ ಜಿಲ್ಲೆ, ರಾಜ್ಯ ಕೇಂದ್ರಕ್ಕೆ ಹತ್ತಿರವಿರುವ ಜಿಲ್ಲೆ, ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ, ಇದು ಆಡಳಿತ ವ್ಯವಸ್ಥೆಯ ವೈಖರಿಯನ್ನು ಸೂಚಿಸುತ್ತದೆ, ಮುಂದಿನ ದಿನಗಳಲ್ಲಿ ಜಿಲ್ಲಾ ಆರೋಗ್ಯ ಕ್ಷೇತ್ರ ಉತ್ತಮ ಸಾಧನೆ ತೋರಬೇಕು ಎಂದು ಸೂಚಿಸಿದರು.
ಡಿಟಿಟಲ್ ಆರೋಗ್ಯ ಪರಿಸರ ವ್ಯವಸ್ಥೆ ಜಾರಿಗೆ ಚಿಂತನೆ :
ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್(ಎಬಿಡಿಎಂ)ನ ಮೂರು ಅಂಶಗಳ ಆಧಾರದ ಮೇಲೆ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆ ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಎಬಿಡಿಎಂ ಅಡಿಯಲ್ಲಿ ಆರೋಗ್ಯ ರಕ್ಷಣೆ ನೀಡುವವರಿಗೆ ಹಾಗೂ ರೋಗಿಗಳಿಗೆ ಅನುಕೂಲವನ್ನು ಕಲ್ಪಿಸುವ ಚಿಂತನೆ ಹೊಂದಿದ್ದು, ಅದರಂತೆ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ(ಎಬಿಎಚ್‍ಎ) ಎಲ್ಲ ಆರೋಗ್ಯ ಸೌಲಭ್ಯಗಳಿಗಾಗಿ ಆರೋಗ್ಯ ಸೌಲಭ್ಯ(ಎಚ್‍ಎಫ್‍ಆರ್) ಮತ್ತು ಆರೋಗ್ಯ ಸೇವೆ ನೀಡುವವರಿಗೆ ಹೆಲ್ತ್‍ಕೇರ್ ಪೆÇ್ರಫೆಷನಲ್ ರಿಜಿಸ್ಟ್ರಿ(ಎಚ್‍ಪಿಆರ್) ಜೊತೆಗೆ ರೋಗಿಗಳಿಗೆ ಅವರ ಮೊಬೈಲ್‍ನಲ್ಲಿ ಅವರ ಡಿಜಿಟಲ್ ಆರೋಗ್ಯ ದಾಖಲೆಗಳನ್ನು ಸಿಗುವಂತೆ ಮಾಡುವ ಸಲುವಾಗಿ ವೈಯಕ್ತಿಕ ಆರೋಗ್ಯ ದಾಖಲೆ(ಪಿಎಚ್‍ಆರ್) ವ್ಯವಸ್ಥೆ, ವೈದ್ಯರು ಮತ್ತು ಪ್ರಯೋಗಾಲಯಗಳು, ಆಸ್ಪತ್ರೆಗಳ ನಿರ್ವಹಣೆ ಮಾಹಿತಿ ವ್ಯವಸ್ಥೆ ಮತ್ತು ಪ್ರಯೋಗಾಲಯಗಳ ನಿರ್ವಹಣೆ ಮಾಹಿತಿ(ಎಚ್‍ಎಂಐಎಸ್ ಮತ್ತು ಎಲ್‍ಎಂಐಎಸ್) ಲಭಿಸುವಂತೆ ಮಾಡುವ ಉದ್ದೇಶದೊಂದಿಗೆ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ದೇಶಾದ್ಯಂತ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ(ಎನ್‍ಎಚ್‍ಎ) ನಡೆಸುತ್ತಿರುವ 100 ಮೈಕ್ರೋಸೈಟ್ ಯೋಜನೆಯು ಖಾಸಗಿ ಆರೋಗ್ಯ ಪೂರೈಕೆದಾರರಲ್ಲಿ ಡಿಜಿಟಲೀಕರಣದ ಅಳವಡಿಕೆಯನ್ನು ಸುಧಾರಿಸುವ ಗುರಿ ಹೊಂದಿದೆ. ಅದರಂತೆ ಖಾಸಗಿ ಆಸ್ಪತ್ರೆಗಳು, ಲ್ಯಾಬ್‍ಗಳು, ಡಯಾಗ್ನಸ್ಟಿಕ್ಸ್ ಮತ್ತು ಫಾರ್ಮಸಿಗಳಿಗೆ ಸಂಬಂಧಿಸಿದ ಡಿಜಿಟಲ್ ಆರೋಗ್ಯ ವ್ಯವಸ್ಥೆಯನ್ನು ರಚಿಸುವ ಚಿಂತನೆ ಹೊಂದಿದೆ. ಆದರೆ, ಈ ಯೋಜನೆ ಅಡಿಯಲ್ಲಿ ಖಾಸಗಿ ಆಸ್ಪತ್ರೆಗಳು, ರೋಗಿಗಳು, ಖಾಸಗಿ ಕ್ಲಿನಿಕ್‍ಗಳು ನೊಂದಣಿ ಆಗಬೇಕಿದೆ ಎಂದರು.
ಮೂರು ಜಿಲ್ಲೆಯಲ್ಲಿ ಆರಂಭ:
ಡಿಟಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಮೊದಲ ಹಂತದಲ್ಲಿ ಮೈಸೂರು, ಬೆಳಗಾವಿ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆರಂಭಿಸಲಾಗುವುದು. ಈ ಜಿಲ್ಲೆಗಳನ್ನು ಅವುಗಳ ಸನ್ನದ್ಧತೆ ಮತ್ತು ಒಟ್ಟಾರೆ ಎಬಿಡಿಎಂ ಕಾರ್ಯಕ್ಷಮತೆ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದ ಅವರು, ಈ ಯೋಜನೆ ಮೂಲಕ ಫೀಲ್ಡ್ ಇಂಟರ್‍ಫೇಸ್ ಏಜೆನ್ಸಿ(ಎಫ್‍ಐಎ), ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್(ಎಸ್‍ವಿವೈಎಂ) ಮೂಲಕ ಪ್ರತಿಯೊಂದು ಖಾಸಗಿ ಕ್ಲಿನಿಕ್‍ಗಳು, ಲ್ಯಾಬ್‍ಗಳು, ಫಾರ್ಮಸಿ ಮತ್ತು ಸಣ್ಣ ಆಸ್ಪತ್ರೆಗಳಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ವಿವರಿಸಿದರು.