ಆರೋಗ್ಯ ಸೇವೆ ಎಲ್ಲರಿಗೂ ದೊರಕವಂತಾಗಲಿ: ಗೋವಿಂದರಾಜು

ತುಮಕೂರು, ಜು. ೨೫- ಆರೋಗ್ಯ ಸೇವೆ ಬಡವರು, ಬಲ್ಲಿದರು ಎನ್ನದೆ ಎಲ್ಲರ ಕೈಗೆಟುಕುವಂತಾಗಬೇಕು ಎಂದು ಜೆಡಿಎಸ್ ಮುಖಂಡ ಹಾಗೂ ಗೆಳೆಯರ ಬಳಗದ ಎನ್. ಗೋವಿಂದರಾಜು ಹೇಳಿದರು.
ನಗರದ ಪಾಲಿಕೆ ಆವರಣದಲ್ಲಿ ಸಪ್ತಗಿರಿ ಅಸ್ಪತ್ರೆ ಬೆಂಗಳೂರು ಇವರು ಪ್ರೇರಣ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಬೆಲೆ ಹೆಚ್ಚಳದ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡವರಿಗೆ ಆರೋಗ್ಯ ಎಂಬುದು ಕೈಗೆಟುಕದ ಸೇವೆಯಾಗಿದೆ. ಕೋವಿಡ್ ಸಂದರ್ಭದಲ್ಲಿ ಇದರಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಎಲ್ಲಾ ಅಂಶಗಳನ್ನು ಮನದಟ್ಟು ಮಾಡಿಕೊಂಡಿರುವ ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ಅಂಗವಿಕಲರನ್ನು ಒಳಗೊಂಡಂತೆ ಸಾರ್ವಜನಿಕರಿಗಾಗಿ ಆಯೋಜಿಸಿರುವ ಆರೋಗ್ಯ ತಪಾಸಣಾ ಶಿಬಿರ ಶ್ಲಾಘನೀಯವಾಗಿದೆ. ಹೆಚ್ಚು ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಸ್ಮಾರ್ಟ್‌ಸಿಟಿ ಎಂದು ಕರೆಯಿಸಿಕೊಳ್ಳುವ ತುಮಕೂರಿನಲ್ಲಿ ಜುಲೈ ೧೬ ರಂದು ನಡೆದಿರುವ ಘಟನೆ ನಿಜಕ್ಕೂ ಮನಕಲಕುವಂತಿದೆ. ಅವೈಜ್ಞಾನಿಕ ಸ್ಮಾರ್ಟ್‌ಸಿಟಿ ಕಾಮಗಾರಿಗಳೇ ಈ ಅನಾಹುತಕ್ಕೆ ಕಾರಣ. ಸಣ್ಷ ಮಳೆಗೆ ಹೀಗಾದರೆ ಮಲೆನಾಡಿನ ರೀತಿ ವಾರಾನುಗಟ್ಟಲೆ ಮಳೆ ಬಂದರೆ ನಗರದಲ್ಲಿ ಇನ್ನೆಷ್ಟು ಜನರನ್ನು ಬಲಿತೆಗೆದುಕೊಳ್ಳತ್ತವೆಯೋ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ. ಕೋವಿಡ್ ಸಮಯದಲ್ಲಿ ಮನೆಯಿಂದ ಹೊರ ಬರದ ಶಾಸಕರು, ಕಾಮಗಾರಿಗಳ ಗುದ್ದಲಿ ಪೂಜೆಗೆ ಮಾತ್ರ ಸಿಮೀತವಾಗಿರುವುದು ಈ ನಗರದ ದುರಂತವೇ ಸರಿ ಎಂದರು.
ಮಾಜಿ ಶಾಸಕ ಡಾ. ರಫೀಕ್ ಅಹಮದ್ ಮಾತನಾಡಿ, ಮಾನವನ ಜೀವನ ಶಕ್ತಿ ಹಾಗೂ ಆಹಾರ ಪದ್ದತಿಯ ಬದಲಾವಣೆ ಹಿನ್ನೆಲೆಯಲ್ಲಿ ಇಂದು ಮನುಷ್ಯ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾನೆ. ಹಣ ಇರುವವರಿಗೆ ಮಾತ್ರ ಗುಣಮಟ್ಟದ ಚಿಕಿತ್ಸೆ ಎಂಬ ಕಾಲಘಟ್ಟದಲ್ಲಿ ಬಡವರಿಗಾಗಿ ಪ್ರೇರಣ ಅಂಗವಿಕಲರ ಕಲ್ಯಾಣಾಭಿವೃದ್ದಿ ಸಂಸ್ಥೆ, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಹಯೋಗದಲ್ಲಿ ಇಂತಹ ಆರೋಗ್ಯ ಶಿಬಿರ ಏರ್ಪಾಡು ಮಾಡಿ, ಉಚಿತವಾಗಿ ಔಧಿಗಳನ್ನು ನೀಡುತ್ತಿರುವುದು ಶ್ಲಾಘನೀಯ. ಇದರಿಂದ ಬಡವರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದರು.
ಮನುಷ್ಯ ಎಂದ ಮೇಲೆ ರೋಗಕ್ಕೆ ತುತ್ತಾಗುವುದು ಸಹಜ. ಆದ್ದರಿಂದ ಪ್ರತಿಯೊಬ್ಬರು ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಹೆಚ್ಚಿನ ಅನಾಹುತ ತಪ್ಪಿಸಬಹುದು ಎಂದರು.
ಇದೇ ವೇಳೆ ಸಮಾಜ ಸೇವಕ ಮುಕದಂ ಆಲಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ, ಪ್ರೇರಣ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯ ವಿ. ಮುರುಗೇಶ್, ಎಸ್. ಬಾಬು, ರೇಣುಕಾಂಬಿಕ, ರಮ್ಯ ಬಿ.,ರೋಜಾ. ಜಿ. ಉಪಸ್ಥಿತರಿದ್ದರು.