ಆರೋಗ್ಯ ಸೇವೆಗೆ ಸಹಕಾರ ಸಚಿವರ ಶ್ಲಾಘನೆ

ಬೆಂಗಳೂರು, ನ. ೬- ಬಡವರ ಆರೋಗ್ಯ ಸೇವೆಗೆ ಉಳ್ಳವರು, ಉದ್ಯಮಿಗಳು ಕೈ ಜೋಡಿಸಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ನೈಸ್ ರಸ್ತೆ ಸಮೀಪದ ವರಾಹಸಂದ್ರದ ಶ್ರೀಬಸವೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀಮತಿ ಕಾಳಮ್ಮ ಮತ್ತು ಮಲ್ಲೇಶಯ್ಯ ಜ್ಞಾಪಕಾರ್ಥವಾಗಿ ನಿರ್ಮಿಸಿರುವ ಆರೋಗ್ಯ ಕೇಂದ್ರವನ್ನು ಮತ್ತು ಪಾಲಿಕೆ ವತಿಯಿಂದ ನಿರ್ಮಿಸಿರುವ ಶುದ್ಧ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿ ಬಿಜೆಪಿ ಕಾರ್ಯಕರ್ತರು ಜೊತೆಗೂಡಿ ಹಮ್ಮಿಕೊಂಡಿರುವ ಆರೋಗ್ಯ ತಪಾಸಣೆ ಶಿಬಿರ ಯಶಸ್ವಿಯಾಗಿ ಕಡುಬಡವರು, ಕೈಲಾಗದ ಅಶಕ್ತರಿಗೆ ತಲುಪಬೇಕಾಗಿದೆ ಎಂದರು.
ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಾಜರಹಳ್ಳಿ ಶಶಿಕುಮಾರ್ ಮಾತನಾಡಿ ಬಿಜೆಪಿ ಕಾರ್ಯಕರ್ತರು ಬಡವರ ಸೇವೆಯಲ್ಲಿ ಸದಾ ಮುಂದಿದ್ದು, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಬಿಜೆಪಿ ಮುಖಂಡ ರುದ್ರೇಶ್ ಸಹಕಾರದಲ್ಲಿ ವಿವಿಧ ಕಾಯಿಲೆಗಳಿಗೆ ತಜ್ಞ ವೈದ್ಯರಿಗೆ ತಪಾಸಣೆ ನಡೆಸಿ ಸೂಕ್ತ ಮಾರ್ಗದರ್ಶನ, ಚಿಕಿತ್ಸೆ, ಔಷಧಿ ನೀಡಲಾಗುತ್ತಿದೆ ಎಂದು ಹೇಳಿದರು.ಬಿಜೆಪಿ ಮುಖಂಡ ರುದ್ರೇಶ್ ಮಾತನಾಡಿ ಪ್ರತಿನಿತ್ಯ ಮುಂಜಾನೆ ೯ರಿಂದ ೧೧ರವರೆಗೆ ಸಾಮಾನ್ಯ ಕಾಯಿಲೆಗೆ ಆರೋಗ್ಯ ತಪಾಸಣೆ ನಡೆಸಿ ಔಷಧಿ ವಿತರಿಸಲಾಗುವುದು ಎಂದರು. ಪಾಲಿಕೆ ಮಾಜಿ ಸದಸ್ಯರಾದ ರ.ಆಂಜನಪ್ಪ, ಆರ್ಯಶ್ರೀನಿವಾಸ್, ವಾರ್ಡ್ ಮಾಜಿ ಅಧ್ಯಕ್ಷರಾದ ಜಯರಾಮುಗೌಡ, ಕುಮಾರ್, ನಗರ ಬಿಜೆಪಿ ಮಂಡಲದ ಅಧ್ಯಕ್ಷ ಅನಿಲ್ ಚಳಗೇರಿ ಇದ್ದರು.