ಆರೋಗ್ಯ ಸೇವೆಗೆ ಕೆಎಸ್ ಆರ್ ಟಿಸಿ ಬಸ್ ಸೌಲಭ್ಯ

ಬೆಂಗಳೂರು,ಏ.30-ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ಜನತಾ ಕರ್ಪ್ಯೂ ವಿಧಿಸಿದ್ದರೂ ಕೋವಿಡ್ ಗೆ ಸಂಬಂಧಪಟ್ಟ ಸೇವಾ ಚಟುವಟಿಕೆಗಳಿಗೆ ಮತ್ತು ಕೋವಿಡ್ ವಾರಿಯರ್ಸ್ ಗಳ ಸೇವೆಗೆ ಅಗತ್ಯವಾದಲ್ಲಿ ಬಸ್ಸುಗಳನ್ನು ಒದಗಿಸಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಇಡೀ ರಾಜ್ಯವೇ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಅತ್ಯಂತ ತುರ್ತು ಸನ್ನಿವೇಶವನ್ನು ಎದುರಿಸುತ್ತಿದೆ. ಆದ್ದರಿಂದ ಸಾರಿಗೆ ನಿಗಮ ಗಳಿಂದಲೂ ಸಹ ಈ ಸೂಕ್ಷ್ಮ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರದ ಪ್ರಯತ್ನಗಳಿಗೆ ಕೈಜೋಡಿಸಿ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದರು.
ಈಗಾಗಲೇ ರಾಜ್ಯದಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಗಳಿಗೆ ಮತ್ತು ಕೋವಿಡ್ ನಿಯಂತ್ರಣ ಕೆಲಸಕಾರ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗಾಗಿ ನಾಲ್ಕೂ ಸಾರಿಗೆ ನಿಗಮಗಳಿಂದ ಅಗತ್ಯಕ್ಕನುಗುಣವಾಗಿ ಬಸ್ಸುಗಳ ಸೇವೆಯನ್ನು ಒದಗಿಸಲಾಗುತ್ತಿದೆ.
ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದಲ್ಲಿ ಈಗಾಗಲೇ ಆರೋಗ್ಯ ಮತ್ತು ತುರ್ತು ಸೇವೆಗಳಿಗಾಗಿ ಪ್ರತಿನಿತ್ಯ 156 ಬಿಎಂಟಿಸಿ ಬಸ್ಸುಗಳನ್ನು ಒದಗಿಸಲಾಗಿದೆ. ಇದರಿಂದಾಗಿ ವಿವಿಧ ಆಸ್ಪತ್ರೆಗಳ ನಡುವೆ ಸಂಪರ್ಕಕ್ಕೆ ಅನುಕೂಲವಾಗಿದೆಯಲ್ಲದೇ ವೈದ್ಯರಿಗೆ , ದಾದಿಯರಿಗೆ, ಪೊಲೀಸರಿಗೆ, ಅಗ್ನಿಶಾಮಕ ದಳದವರಿಗೆ, ನೀರು-ವಿದ್ಯುತ್ ಪೂರೈಕೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಸಂಚಾರ ಸೌಲಭ್ಯಕ್ಕೆ ಸಹಾಯಕವಾಗಿದೆ. ಕೆ.ಎಸ್ ಆರ್ ಟಿಸಿಯಿಂದ ಇದೇ ರೀತಿ ಸುಮಾರು 50 ಬಸ್ಸುಗಳು ಸಂಚರಿಸುತ್ತಿವೆ ಎಂದರು.
ವಾಯವ್ಯ ಸಾರಿಗೆ ಮತ್ತು ಈಶಾನ್ಯ ಸಾರಿಗೆ ನಿಗಮಗಳಿಂದಲೂ ಆಯಾ ಜಿಲ್ಲಾಡಳಿತವು ಮನವಿ ಮಾಡಿಕೊಂಡ ಪ್ರಕಾರ ತುರ್ತು ಸೇವೆಗಾಗಿ ಬಸ್ಸುಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಡಳಿತದಿಂದ ಒಂದು ವೇಳೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬಸ್ಸುಗಳಿಗೆ ಬೇಡಿಕೆ ಬಂದರೆ ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಬಸ್ಸುಗಳನ್ನು ಒದಗಿಸುವುದಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಲಾಕ್ ಡೌನ್ ಅವಧಿಯಲ್ಲಿ ಸಾರ್ವಜನಿಕರ ಸಾರಿಗೆ ಸಂಚಾರವನ್ನು ನಿಷೇಧಿಸಿರುವುದರಿಂದ ಈ ವಿಶೇಷ ಬಸ್ಸುಗಳ ಸೌಕರ್ಯವೂ ಕೇವಲ ಆರೋಗ್ಯ ಮತ್ತು ತುರ್ತು ಸಂದರ್ಭಗಳನ್ನು ನಿಭಾಯಿಸಲು ಸೇವೆ ಸಲ್ಲಿಸುತ್ತಿರುವವರಿಗೆ ಮಾತ್ರ ಸೀಮಿತವಾಗಿದೆ. ಇತರ ಪ್ರಯಾಣಿಕರಿಗೆ ಈ ಬಸ್ ಸೌಲಭ್ಯಗಳು ಇರುವುದಿಲ್ಲ. ಸಾರ್ವಜನಿಕರು ಈ ಸೂಕ್ಷ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸೂಕ್ತ ಸಹಕಾರ ನೀಡಬೇಕೆಂದು ಸವದಿ ಮನವಿ ಮಾಡಿಕೊಂಡಿದ್ದಾರೆ.
ಕಳೆದವರ್ಷ ಕೋವಿಡ್ ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ಸಾರಿಗೆ ನಿಗಮಗಳ ಬಸ್ಸುಗಳನ್ನೇ ಮೊಬೈಲ್ ಕ್ಲಿನಿಕ್ ಗಳನ್ನಾಗಿ ಮತ್ತು ಕೋವಿಡ್ ಟೆಸ್ಟಿಂಗ್ ವಾಹನಗಳನ್ನಾಗಿ ಮಾರ್ಪಡಿಸಲಾಗಿತ್ತು. ಅಂಥ ಸುಮಾರು 20 ಮೊಬೈಲ್ ಬಸ್ಸುಗಳೂ ಸಹ ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಆಯಾ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗಳ ಸಹಯೋಗದೊಂದಿಗೆ ಸೇವೆ ಸಲ್ಲಿಸುತ್ತಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೋವಿಡ್ ವಾರಿಯರ್ಸ್ ಗಳಂತೆಯೇ ಸಾರಿಗೆ ನಿಗಮಗಳ ಸಿಬ್ಬಂದಿಗಳು ಸಹ ಇಂದಿನ ಸಂಕಷ್ಟದ ಕಾಲದಲ್ಲಿ ಸೇವೆಸಲ್ಲಿಸುತ್ತಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.