`ಆರೋಗ್ಯ ಸುಧಾರಣೆ ಮತ್ತು ಚಿಕಿತ್ಸೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಅತ್ಯಗತ್ಯ’’

ಚಿತ್ರದುರ್ಗ. ಸೆ.೨೬; ದೇಶದ ಜನತೆಯ ಆರೋಗ್ಯ ಸುಧಾರಣೆ ಮತ್ತು ಚಿಕಿತ್ಸೆಗೆ ವಿಜ್ಞಾನ ಮತ್ತು ತಂತ್ರಜ್ಞಾನದ ನೆರವು ಅತ್ಯಗತ್ಯವಾಗಿದೆ, ಈ ದೆಸೆಯಲ್ಲ್ಲಿ ಭಾರತ ಸರ್ಕಾರದ ಕಾರ್ಯ ಶ್ಲಾಘನೀಯವಾಗಿದೆ ಎಂದು ಬೆಂಗಳೂರಿನ ಟ್ರಿನಿಟಿ ಸೆಂಟ್ರಲ್ ಹಾಸ್ಪಿಟಲ್ ತಜ್ಞ ವೈದ್ಯ ಡಾ. ರುದ್ರೇಶ್ ಎಂ. ಹಿರೇಮಠ ತಿಳಿಸಿದರು. ಅವರಿಂದು ದಿ. ಎಂ.ಎನ್. ಮುಷ್ಟೂರಪ್ಪನವರ ಸ್ಮರಣಾರ್ಥ ದಾವಣಗೆರೆಯ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವಿನೋಬನಗರದ ಎಸ್.ಜೆ.ಜೆ.ಎಂ. ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಪಾನ್ ದೇಶ ತಾಂತ್ರಿಕ ಕ್ಷೇತ್ರದಲ್ಲಿ ಪ್ರಪಂಚದಲ್ಲೇ ಮುಂದುವರಿದ ದೇಶವಾದರೂ ಸಹ ಅತ್ಯಂತ ಹೆಚ್ಚು ಕ್ಯಾನ್ಸರ್ ರೋಗಿಗಳಿರುವ ದೇಶವಾಗಿದೆ. ಅದಕ್ಕೆ ಕಾರಣ ಆ ದೇಶದ ಜನತೆಯಲ್ಲಿ ಫಾಸ್ಟ್ಫುಡ್ ಆಹಾರ ಪದ್ಧತಿಯೇ ಕಾರಣವಾಗಿದೆ. 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತೀಯರ ಆಹಾರ ಪದ್ಧತಿ ಪ್ರಪಂಚದಲ್ಲೇ ಅತ್ಯಂತ ಆರೋಗ್ಯವಂತ ಸಮಾಜದ ಬೆಳವಣಿಗೆಗೆ ಸಾಕ್ಷೀಭೂತವಾಗಿದೆ. ನಮ್ಮ ಹಿರಿಯರ ಜಾನಪದ ಮತ್ತು ದೈವೀಪೋಷಿತ ಆಹಾರ ಪದ್ಧತಿ ಜಗತ್ತಿಗೆ ಮಾದರಿಯಾಗಿದೆ ಎಂದು ತಿಳಿಸಿದರು.  ನಾವು ಸಮಯಕ್ಕೆ ಸರಿಯಾಗಿ ತಿನ್ನುವ ಆಹಾರದ ಜೊತೆಗೆ ಕನಿಷ್ಠ ಮೂರು ತಾಸು ಸೂರ್ಯನ ಬೆಳಕಿನಲ್ಲಿ ನಮ್ಮ ಮಕ್ಕಳನ್ನು ಬಿಡಬೇಕಾಗಿದೆ. ಇದರಿಂದ ಡಿ. ವಿಟಮಿನ್ ದೊರೆತು ನಮ್ಮ ಮಕ್ಕಳು ಆರೋಗ್ಯವಂತರಾಗುತ್ತಾರೆ. ಮಗು ಆರೋಗ್ಯವಾಗಿದ್ದರೆ ಸಮಾಜ ಆರೋಗ್ಯವಾಗಿರುತ್ತದೆ. ಸಮಾಜ ಆರೋಗ್ಯವಾಗಿದ್ದರೆ ದೇಶ ಸಮೃದ್ಧಿಯಾಗಿರುತ್ತದೆ ಎಂದು ತಿಳಿಸಿದರು. ಕಳೆದ ಎರಡು ವರ್ಷಗಳಲ್ಲಿ ಕರೋನಾದಿಂದ ಪ್ರಪಂಚವೇ ನಲುಗಿ ಹೋಗಿದೆ. ನಮ್ಮ ದೇಶೀಯ ಆಹಾರ ಪದ್ಧತಿ ನಮ್ಮನ್ನು ಈ ರೋಗದಿಂದ ಕನಿಷ್ಠವಾದರೂ ಸುರಕ್ಷತೆಯಿಂದ ಕಾಪಾಡಿದೆ, ಆದರೆ ವಿದೇಶಗಳಲ್ಲಿ ಲಕ್ಷಾಂತರ ಜನರು ಅಸುನೀಗಿರುತ್ತಾರೆ. ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಆರಂಭಿಕ ಹಂತದಲ್ಲಿಯೇ ಬಳಕೆ ಮಾಡಿ ಭವಿಷ್ಯದ ಆರೋಗ್ಯಕ್ಕೆ ಬೇಕಾದ ಬಿ.ಸಿ.ಜಿ. ಚುಚ್ಚುಮದ್ದನ್ನು ಚಿಕ್ಕಮಕ್ಕಳಿಗೆ ಹಾಕಿದ್ದರಿಂದ ಟಿ.ಬಿ., ಕುಷ್ಠರೋಗ, ದಡಾರ, ಗಂಟಲುಬೇನೆ, ಕಾಲರಾ, ನಾಯಿಕೆಮ್ಮು, ಪಾರ್ಶ್ವವಾಯು, ಅಪಸ್ಮಾರ ಮುಂತಾದ ಮಾರಣಾಂತಿಕ ಕಾಯಿಲೆಗಳಿಂದ ನಮ್ಮ ಮಕ್ಕಳನ್ನು ರಕ್ಷಿಸಿ ದೇಶವನ್ನು ಆರೋಗ್ಯವಂತ ದೇಶವನ್ನಾಗಿಸಲು ನೆರವಾಗಿದೆ. ಸಮಾರಂಭದ ಇನ್ನೊಬ್ಬ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಮಮತಾ ನಾಗರಾಜ್ ಮಾತನಾಡಿ ನಮ್ಮ ದೇಶದ ಆಯುರ್ವೇದ ಪದ್ಧತಿ ಜನಸಾಮಾನ್ಯರ ಬದುಕಿಗೆ ಹತ್ತಿರವಾಗಿದೆ. ಇದರ ಮಾಹಿತಿಯನ್ನು ಶಾಲಾ ಪಠ್ಯಪುಸ್ತಕದಲ್ಲಿ ಅಳವಡಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಕ್ರಮವಹಿಸಬೇಕೆಂದು ಒತ್ತಾಯಿಸಿದರು. ಕಾರ್ಯಕ್ರಮದ ಅತಿಥಿಗಳಾಗಿದ್ದ ಡಯಟ್‌ನ ನಿವೃತ್ತ ಪ್ರಾಧ್ಯಾಪಕ ಉಮೇಶ್ ಬೊಂಬಾರೆ ಮಾತನಾಡಿ ಶ್ರೀಯುತ ಎಂ.ಎನ್. ಮುಷ್ಟೂರಪ್ಪ ಮತ್ತು ಶ್ರೀ ದೊಗ್ಗಳ್ಳಿ ಗೌಡ್ರ ಪುಟ್ಟರಾಜುರವರು ಸಮಾಜದ ಒಳಿತಿಗಾಗಿ ಶ್ರಮಿಸಿದವರು. ಅವರ ಅಕಾಲಿಕ ಮರಣ ಸಮಾಜಕ್ಕಾದ ದೊಡ್ಡ ನಷ್ಟ. ಅವರುಗಳು ವಿಜ್ಞಾನ, ಸಾಮಾಜಿಕ, ಮಕ್ಕಳ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಾಗಿದ್ದಾರೆ. ಅವರುಗಳ ಆಶಯಗಳನ್ನು ನಾವು ಮುಂದುವರಿಸೋಣ ಎಂದು ಕರೆ ನೀಡಿದರು. ಸಮಾರಂಭದ ಅತಿಥಿಗಳಾಗಿ ಎಸ್.ಜೆ.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಶ್ರೀ ಮನೋಹರ್ ಚಿಗಟೇರಿ, ಶೈಕ್ಷಣಿಕ ಸಂಯೋಜಕಿ ಶ್ರೀಮತಿ ಆರ್. ವಾಗ್ದೇವಿ, ಕ.ರಾ.ವಿ.ಪ. ದ ಎಂ. ಗುರುಸಿದ್ದಸ್ವಾಮಿ, ಅಂಗಡಿ ಸಂಗಪ್ಪ, ಕೆ. ಸಿದ್ದೇಶ್, ವಿವೇಕಾನಂದ ಸ್ವಾಮಿ, ಶಾಂತಯ್ಯ ಪರಡಿಮಠ  ಪಾಲ್ಗೊಂಡಿದ್ದರು.