
ಬೆಂಗಳೂರು, ಏ.೬-ಕೋವಿಡ್ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತೀರುವ ಆರೋಗ್ಯ ಸಿಬ್ಬಂದಿ ವೇತನ ವಿಳಂಬ ಆಗದಂತೆ ಸೂಕ್ತ ಕ್ರಮವಹಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
ನಗರದಲ್ಲಿಂದು ವಿಕ್ಟೋರಿಯ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪಾಲಿಕೆ ವ್ಯಾಪ್ತಿಯ ಆರೋಗ್ಯ ಸಿಬ್ಬಂದಿ ಮನುಕುಲದ ಸೇವೆಗೆ ನಿಂತಿದ್ದಾರೆ.ಇಂತಹ ಸಂದರ್ಭದಲ್ಲಿ ಅವರಿಗೆ ತೊಂದರೆ ಆಗಬಾರದು.ವೇತನ ವಿಳಂಬ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಶೀಘ್ರದಲ್ಲೇ ಸಮಸ್ಯೆ ದೂರಗೊಳಿಸಲಾಗುವುದು ಎಂದು ಹೇಳಿದರು.
೨ ಲಕ್ಷ ಲಸಿಕೆ: ಇಂದು ಬಿಬಿಎಂಪಿಗೆ ೨ ಲಕ್ಷ ಲಸಿಕೆ ಬಂದಿದ್ದು, ವಿಕ್ಟೋರಿಯಾ ಸೇರಿದಂತೆ ಇನ್ನಿತರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ವೇಗ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಕೋವಿಡ್ ಲಸಿಕೆ ನಮಗೆ ರಕ್ಷ ಕವಚ ಇದ್ದಂತೆ. ಹಾಗಾಗಿ, ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎಂದ ಅವರು, ೪೫ ವರ್ಷ ಮೇಲ್ಪಟ್ಟವರಿಗೆ ಏ.೧ರಿಂದ ಲಸಿಕೆ ಹಾಕಲಾಗುತ್ತಿದ್ದು, ಆರೋಗ್ಯ ಸೇತು ಆಪ್ನಲ್ಲಿ ನೋಂದಣಿ ಮಾಡಿಸಿಯೂ ಲಸಿಕೆ ಪಡೆಯಬಹುದು. ಅಥವಾ ನೋಂದಣಿ ಮಾಡಿಸದೆಯೂ ನೇರವಾಗಿ ಕೇಂದ್ರಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಬಹುದು. ಲಸಿಕೆಗೆ ಭಾವಚಿತ್ರವಿರುವ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಕಡ್ಡಾಯ ಎಂದರು.
ಈ ವೇಳೆ ವಿಶೇಷ ಆಯುಕ್ತರು(ಆರೋಗ್ಯ) ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜೇಂದ್ರ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕೋವಿಡ್ ಸೋಂಕಿತರ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೈಗೊಂಡಿರುವ ಸಿದ್ಧತೆಯನ್ನು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ಗುಪ್ತರವರು ಇಂದು ಪರಿಶೀಲಿಸಿದರು.