ಆರೋಗ್ಯ ಸಿಂಚನ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ”


ಸಂಜೆವಾಣಿ ವಾರ್ತೆ
ಸಿರಿಗೇರಿ ಆ.21. ಗ್ರಾಮದಲ್ಲಿ ಕಳೆದವಾರ ವಿದ್ಯಾರ್ಥಿಗಳಿಗಾಗಿ ಪ್ರಾಜೆಕ್ಟರ್ ಮೂಲಕ ಸಂಪೂರ್ಣ ಆರೋಗ್ಯ ಮಾಹಿತಿ ನೀಡುವ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆಯಿಂದ ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಸತತ ಒಂದು ವಾರದವರೆಗೆ ಸರತಿಯಾಗಿ ಸ್ಥಳೀಯ ಎಲ್ಲಾ ಪ್ರಾಥಮಿಕ ಪ್ರೌಢಶಾಲೆಗಳ 6 ರಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆರೋಗ್ಯ ಶಿಕ್ಷಣವನ್ನು ಸಮಗ್ರವಾಗಿ ತಿಳಿಸಿಕೊಡಲಾಯಿತು. ಪ್ರಾಜೆಕ್ಟರ್ ಪರದೆಯಲ್ಲಿ ಮಲೇರಿಯಾ, ಕ್ಷಯ (ಟಿಬಿ), ಕುಷ್ಟರೋಗ, ಪ್ರಮುಖ ರೋಗಗಗಳು ಹರಡುವ ಕುರಿತು ಮತ್ತು ಬಾಲ್ಯವಿವಾಹ, ಪರಿಸರನೈರ್ಮಲ್ಯ, ಹದಿಹರೆಯದವರ ಶಿಕ್ಷಣ, ಋತುಚಕ್ರ ವಿಷಯಗಳ ಮಾಹಿತಿ ನೀಡುವ ವೀಡಿಯೋ ದೃಶ್ಯಗಳ ಪ್ರದರ್ಶನ ಮಾಡಲಾಯಿತು. ಪ್ರಾಜೆಕ್ಟರ್ ವಿಡಿಯೋ ಪ್ರದರ್ಶನದ ನಂತರ ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಕ ಅಧಿಕಾರಿ ಸತೀಶ್‍ಕುಮಾರ್ ವಿದ್ಯಾರ್ಥಿಗಳಿಗೆ ಮಾಹಿತಿನೀಡಿ ವೀಡಿಯೋದಲ್ಲಿ ಪ್ರದರ್ಶನಗೊಂಡ ಎಲ್ಲಾ ಪ್ರಮುಖ ವಿಷಯಗಳು ವಿದ್ಯಾರ್ಥಿಗಳು ಅರಿತುಕೊಂಡು ತಮ್ಮ ಮನೆಯಲ್ಲಿನ ಪೋಷಕರಿಗೆ, ಸುತ್ತಮುತ್ತಲಿನ ಇತರೆ ನೆರೆಹೊರೆಯವರಿಗೆ ಮಾಹಿತಿ ನೀಡಿ ಆರೋಗ್ಯ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳಬೇಕು. ಈವಿಷಯಗಳನ್ನು ಜನರಲ್ಲಿ ತಿಳಿಸಿ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು. ಸ್ಥಳೀಯ ಸರ್ಕಾರಿ, ಖಾಸಗೀ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ಆರೋಗ್ಯ ಸಿಂಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗ್ರಾಮ ಪಂಚಾಯಿತಿ ಸಿಬ್ಬಂದಿಯವರು, ಆಶಾ ಕಾರ್ಯಕರ್ತರು, ಶಿಕ್ಷಕರು ಈ ಕಾರ್ಯಕ್ರಮಕ್ಕೆ ಸಹಕರಿಸಿದ್ದರು.