ಸೈದಾಪುರ:ಜೂ.23:ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಹಾಗೂ ಒತ್ತಡದ ದೈನಂದಿನ ಬದುಕಿನ ದಿನಗಳ ಮದ್ಯೆ ಜನರಲ್ಲಿ ಆರೋಗ್ಯ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಇವುಗಳ ನಿವಾರಣೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಸಹಕಾರಿಯಾಗುತ್ತದೆ ಎಂದು ಸೈದಾಪುರ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯವೈದ್ಯಾಧಿಕಾರಿ ಡಾ. ಉಮಾದೇವಿ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ, ತಾಲ್ಲೂಕು ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಕಾಯಿಲೆ ಬರುವ ಮುನ್ನವೇ ನಾವು ಎಚ್ಚರವಹಿಸಿದರೆ ನಾವು ಆಸ್ಪತ್ರೆಗಳಿಗೆ ದಾಖಲಾಗುವುದು ಮತ್ತು ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದು. ಅದರಂತೆ ಗ್ರಾಮೀಣ ಭಾಗದಲ್ಲಿರುವವರಿಗೆ ಆರೋಗ್ಯದ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಿ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಬೇಕಾದ ಜವಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು. ಇದಕ್ಕೂ ಮೊದಲು ಉಚಿತ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ ಒಟ್ಟು 100 ಜನರಿಗೆ, ಸಂಜೀವಿನ ಆಸ್ಪತ್ರೆ ಬೆಂಗಳೂರಿನಿಂದ ಆಗಮಿಸಿದ ವೈದ್ಯರ ತಂಡವು ಮಧುಮೇಹ, ರಕ್ತದೊತ್ತಡ, ಇಸಿಜಿ, ಚಿಕ್ಕಮಕ್ಕಳ ಕಾಯಿಲೆಗಳು ಮತ್ತು ಸಾಮಾನ್ಯ ಆರೋಗ್ಯ ತಪಾಸಣೆಗಳನ್ನು ಮಾಡಿದರು. ನಂತರ ನರರೋಗದ ಸಮಸ್ಯೆಯಿಂದ ಬಳುತ್ತಿರುವ ಸುಮಾರು 5ರಿಂದ6 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸಂಜೀವಿನ ಆಸ್ಪತ್ರೆಗೆ ಬರುವಂತೆ ತಿಳಿಸಿದರು.
ಡಾ. ಸೋಯಿಲ್, ಮಂಜುನಾಥ, ಗಂಗಾಧರ, ಅನಿಲ ಕುಮಾರ, ಡಾ. ಫಾಯಿಮುದ್ ಸುಲ್ತಾನ್, ಡಾ. ಅಶ್ವಿನಿ, ಡಾ, ನಿಖಿಲ್, ಆರೋಗ್ಯ ಮಿತ್ರ ಮಹಿಪಾಲರೆಡ್ಡಿ ಮುನಗಾಲ್, ಜಮೀರ್ ಬದ್ದೇಪಲ್ಲಿ, ಶಿವಶಂಕರ ಯಲ್ಹೇರಿ, ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಇತರರಿದ್ದರು.