ಆರೋಗ್ಯ ಸಂಪತ್ತಿಗಿಂತಲೂ ಮಿಗಿಲಾದ ಸಂಪತ್ತಿಲ್ಲ

ಮೈಸೂರು:ಏ:07: ವಿಶ್ವದಲ್ಲಿ ಆರೋಗ್ಯ ಸಂಪತ್ತಿಗಿಂತಲೂ ಮಿಗಿಲಾದ ಸಂಪತ್ತು ಯಾವುದೂ ಇಲ್ಲ ಎಂದು ಮೈಸೂರಿನ ಸುಯೋಗ ಅಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷ ಡಾ|| ಎಸ್.ಪಿ. ಯೋಗಣ್ಣ ಅಭಿಪ್ರಾಯಪಟ್ಟರು.
ಅವರು ಇಂದು ಬೆಳಿಗ್ಗೆ ಮೈಸೂರಿನ ನಿವೇದಿತಾ ನಗರದಲ್ಲಿರುವ ನಿವೇದಿತಾ ಉದ್ಯಾನವನದಲ್ಲಿ “ವಿಶ್ವ ಆರೋಗ್ಯ ದಿನಾಚರಣೆ” ಅಂಗವಾಗಿ ಸುಯೋಗ್ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ಆರೋಗ್ಯ ಜಾಥಾ ಕಾರ್ಯಕ್ರಮವನ್ನು ವರ್ಣರಂಜಿತ ಬೆಲೂನ್‍ಗಳನ್ನು ಹಾರಿ ಬಿಡುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ವಿಶ್ವದಲ್ಲಿ ಹಣ, ವಿದ್ಯಕುಶಲತೆ ಸೇರಿದಂತೆ ಇನ್ನಿತರ ಸಂಪತ್ತುಗಳಿದ್ದರೂ ಇವುಗಳಾವುವು ಆರೋಗ್ಯ ಎಂಬ ಸಂಪತ್ತಿನ ಮುಂದೆ ತೃಣ ಸಮಾನವಾದವುಗಳಾಗಿವೆ ಎಂದರು. ಮನುಷ್ಯರಲ್ಲಿ ಆರೋಗ್ಯ ಚೆನ್ನಾಗಿದ್ದರೆ ಆತನಿಗೆ ಬೇರಾವ ಸಂಪತ್ತಿನ ಅವಶ್ಯಕತೆ ಇಲ್ಲ ಎಂದರು.
ಮನುಷ್ಯರು ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟಿಕೊಳ್ಳಲು ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಅತ್ಯಗತ್ಯ. ಇವುಗಳಲ್ಲಿ ಮುಖ್ಯವಾಗಿ ಪ್ರತಿದಿನ ಮುಂಜಾನೆ ಅಥವಾ ಸಂಜೆ ಕನಿಷ್ಠ 2 ಕಿ.ಮೀಗಳ ಕಾಲು ನಡಿಗೆ, ಲಘುವ್ಯಾಯಾಮ ಇವುಗಳನ್ನು ರೂಢಿಸಿಕೊಳ್ಳುವುದರೊಂದಿಗೆ ತಾವು ತಿನ್ನುವ ಪದಾರ್ಥಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಮತ್ತು ಸಕ್ಕರೆಗಳನ್ನು ಸೇವಿಸದಿರುವುದು ಒಣ ಹಣ್ಣುಗಳಾದ ದ್ರಾಕ್ಷಿ, ಬಾದಾಮಿ, ಕರ್ಜುರಗಳ ಸೇವನೆಯೊಂದಿಗೆ ಕಡಲೆಕಾಯಿ ಬೀಜವನ್ನು ಸೇವಿಸುವುದು ಉತ್ತಮ. ಇವುಗಳು ದೇಹಕ್ಕೆ ಶಕ್ತಿ ನೀಡುವುದಲ್ಲದೆ ತಂಪನ್ನೂ ಸಹಾ ನೀಡುತ್ತದೆ. ಇವೆಲ್ಲಕ್ಕಿಂತ ಮಿಗಿಲಾಗಿ ಪ್ರತಿದಿನ 3 ಲೀಟರ್‍ಗಳಷ್ಟು ಶುದ್ಧ ನೀರನ್ನು ಕುಡಿಯುವುದರೊಂದಿಗೆ ಈ ಮೇಲೆ ತಿಳಿಸಿಸುವಂತೆ ನಡೆದುಕೊಂಡಲ್ಲಿ ಆರೋಗ್ಯ ಪರಿಸ್ಥಿತಿ ಸುಸ್ಥಿತಿಯಲ್ಲಿರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದರು.
ಮಾಂಸಾಹಾರಿಗಳಾಗಿದ್ದಲ್ಲಿ ವಾರದಲ್ಲಿ ಒಂದು ಅಥವಾ ಎರಡು ದಿನ ಮಾಂಸ, ಮೀನುಗಳನ್ನು ಸೇವಿಸಲು ಯಾವುದೇ ಅಡ್ಡಿಯಿಲ್ಲ ಸಸ್ಯಾಹಾರಿಗಳಾಗಿದ್ದಲ್ಲಿ ಅವರು ಪ್ರತಿದಿನ ವಿವಿಧ ರೀತಿಯ ಸೊಪ್ಪುಗಳಿಂದ ಮಾಡಿದ ಹುಳ್ಳಿ ಪಲ್ಯ ಇತ್ಯಾದಿಗಳನ್ನು ಸೇವಿಸುವುದರೊಂದಿಗೆ ರಾತ್ರಿ ಬೇಳೆ ಒಂದೊಂದು ಬಾಳೆ ಹಣ್ಣನ್ನು ತಿನ್ನುವುದು ಉತ್ತಮ ಎಂದರು.
ವಿಶ್ವಸಂಸ್ಥೆಯ ಆದೇಶದಂತೆ ಇಂದು ವಿಶ್ವದಲ್ಲೆಡೆ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದ್ದು, ಅದರಂತೆ ಇಂದು ನಮ್ಮ ಆಸ್ಪತ್ರೆ ವತಿಯಿಂದ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದ್ದು, ವಿಶ್ವಸಂಸ್ಥೆಯ ಪ್ರಧಾನಗುರಿ ಎಲ್ಲರೂ ಆರೋಗ್ಯದಿಂದ ಇರಬೇಕೆಂಬುದೇ ಆಗಿದ್ದು, ಈ ದಿಸೆಯಲ್ಲಿ ಇಂದು ಆರೋಗ್ಯ ಜಾಥಾವನ್ನು ಆಯೋಜಿಸಲಾಗಿದೆ ಎಂದು ನುಡಿದರು.
ನಿವೇದಿತಾ ನಗರದ ಉದ್ಯಾನವನದಿಂದ ಹೊರಟ ಆರೋಗ್ಯ ಜಾಥವು ನಿವೇದಿತಾನಗರ, ಕುವೆಂಪುನಗರ, ರಾಮಕೃಷ್ಣನಗರಗಳ ಪ್ರಮುಖ ರಸ್ತೆಗಳ ಮೂಲಕವಾಗಿ ಸುಯೋಗ್ ಆಸ್ಪತ್ರೆ ತಲುಪಿತು.
ಇಂದಿನ ಆರೋಗ್ಯ ಜಾಥದಲ್ಲಿ ನಗರ ಪಾಲಿಕೆ ಸದಸ್ಯೆ ನಿರ್ಮಲಹರೀಶ್‍ರವರ ಪತಿ ಪರೀಶ್, ಸುಯೋಗ್ ಆಸ್ಪತ್ರೆಯ ಸಿಒಒ ಡಾ|| ಮದನ್, ಡಾ|| ಹೇಮಂತ್ ಇತರರು ಇದ್ದರು.