ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.28 :- ಹಣಕ್ಕಿಂತ ಅರೋಗ್ಯ ಮುಖ್ಯವಾಗಿದ್ದು ನಾವು ಆರೋಗ್ಯವಾಗಿರುವ ಜೊತೆಗೆ ನಮ್ಮ ಸುತ್ತಮುತ್ತಲಿನ ಜನತೆಯು ಆರೋಗ್ಯವಾಗಿರಬೇಕು ಎಂದು ತಿಳಿದು ವೈದ್ಯರಾದ ನಾವುಗಳು ನಮ್ಮ ಜೀವಿತಾವಧಿಯಲ್ಲಿ ಉತ್ತಮ ಸೇವೆಕಾರ್ಯ ಮಾಡಬೇಕು ಎಂದು ಡಾ ಪುಷ್ಪಾ ಶ್ರೀನಿವಾಸ ತಿಳಿಸಿದರು.
ಅವರು ತಾಲೂಕಿನ ಹುರುಳಿಹಾಳ್ ಗ್ರಾಮದಲ್ಲಿ ದಿ ಎನ್ ಟಿ ಬೊಮ್ಮಣ್ಣ ಹಾಗೂ ದಿ ವೀರಭದ್ರಪ್ಪ ಅವರ ಸ್ಮರಣಾರ್ಥ ಡಾ ಎನ್ ಟಿ ಶ್ರೀನಿವಾಸ್ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಮಾತನಾಡುತ್ತ ಕೂಡ್ಲಿಗಿ ತಾಲೂಕಿನಲ್ಲಿ ಆರೋಗ್ಯ ಕೊರತೆ ಇದ್ದು ಇದನ್ನರಿತ ನೇತ್ರತಜ್ಞ ಹಾಗೂ ನನ್ನ ಪತಿ ಡಾ ಶ್ರೀನಿವಾಸ್ ಕೂಡ್ಲಿಗಿ ತಾಲೂಕಿನ ಜಿಲ್ಲಾಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಉಚಿತ ಆರೋಗ್ಯ ಶಿಬಿರ ನಡೆಸುತ್ತಿರುವುದು ಉತ್ತಮ ಕಾರ್ಯವಾಗಿದ್ದು ಶಿಬಿರದಲ್ಲಿ ನುರಿತ ವೈದ್ಯರ ತಂಡ ಭಾಗವಹಿಸಿ ಆರೋಗ್ಯ ತಪಾಸಣೆ, ಔಷಧಿ ಶಸ್ತ್ರ ಚಿಕಿತ್ಸೆ ನೀಡುತ್ತಿದ್ದರಿಂದ ಜನರು ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಉತ್ತಮ ರೆಸ್ಪಾನ್ಸ್ ತೋರಿಸುತ್ತಿದ್ದಾರೆ ಎಂದರು.
ಪತಿ ಡಾ ಶ್ರೀನಿವಾಸ್ ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು ನಿಮ್ಮ ಅನಿಸಿಕೆ ಏನು ಎಂದು ಪತ್ರಕರ್ತರ ಪ್ರಶ್ನೆಗೆ ಪತಿ ಶ್ರೀನಿವಾಸ್ ರನ್ನು 17ವರ್ಷದಿಂದ ಬಲ್ಲೆ ಅವರ ಜನಸೇವೆ ತುಂಬಾ ಖುಷಿಕೊಡುತ್ತದೆ ರಾಜಕೀಯ ಎಂಟ್ರಿಯಾಗುತ್ತಿರುವುದು ಉತ್ತಮವೇ ವೈದ್ಯ ಸೇವೆ ಜೊತೆಗೆ ಜನರಿಗೆ ಸಿಗುವ ಸವಲತ್ತು ಕೊಡಿಸುವಲ್ಲಿ ಅವರು ಇಟ್ಟಿರುವ ಹೆಜ್ಜೆಗೆ ನನ್ನ ಬೆಂಬಲವಿದೆ ಅಲ್ಲದೆ ನಾ ತಿಳಿದ ಹಾಗೇ ಕೂಡ್ಲಿಗಿ ಕ್ಷೇತ್ರದಲ್ಲಿ ಡಾ ಶ್ರೀನಿವಾಸ್ ಅವರಿಗೆ ಉತ್ತಮ ರೆಸ್ಪಾನ್ಸ್ ಇದೆ ಎಂದರು.
ಕರ್ನಾಟಕ ಮೂಲದ ಲಂಡನ್ ನ ವೈದ್ಯ ವೃತ್ತಿಯ ಜೊತೆಗೆ ಅಲ್ಲಿನ ಕೌನ್ಸಿಲರ್ ಆಗಿರುವ ಡಾ ಕುಮಾರನಾಯ್ಕ್ ಮಾತನಾಡಿ ಡಾ ಶ್ರೀನಿವಾಸ್ ಅವರು ನನ್ನ ಸ್ನೇಹಿತರು ಅವರನ್ನು 30ವರ್ಷಗಳಿಂದ ಬಲ್ಲೆ ಅವರ ಜನಪರ ಕಾಳಜಿ ಸರಳ ಜೀವನ, ಪತಿಪತ್ನಿ ನಡುವಿನ ಅಂಡರ್ ಸ್ಟ್ಯಾಂಡ್ ಸಂತಸ ತರುತ್ತದೆ ಇಂತಹ ವ್ಯಕ್ತಿ ರಾಜಕಾರಣ ಬಂದರೆ ಒಳಿತು ಗೆಳೆಯನ ಸೇವೆಗೆ ಅಭಿನಂದನೆ ಸಲ್ಲಿಸಿದರು.
ಕೂಡ್ಲಿಗಿ ಕ್ಷೇತ್ರದ ಕಾಂಗ್ರೇಸ್ ಆಕಾಂಕ್ಷಿ ಡಾ ಶ್ರೀನಿವಾಸ್ ಮಾತನಾಡಿ ರಾಜಕೀಯ ಅನುಭವ ನಮ್ಮ ತಂದೆ ಮಾಜಿ ಶಾಸಕ ದಿ ಎನ್ ಟಿ ಬೊಮ್ಮಣ್ಣ ಮಾದರಿಯಾಗಿದ್ದು ಜನಪರ ಕಾಳಜಿ ಅವರು ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಸಿಗಲು ತೆರೆದ ಹೈಸ್ಕೂಲ್ ಗಳು ಇಂದಿಗೂ ಆಯಾಭಾಗದಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿವೆ ಅದರಂತೆ ಕೂಡ್ಲಿಗಿ ಕ್ಷೇತ್ರದಲ್ಲಿ ಪೌಷ್ಟಿಕತೆ ಕಡಿಮೆ ಇದ್ದು ಇದರ ಉದ್ದೇಶದಿಂದ ಕೂಡ್ಲಿಗಿ ಕ್ಷೇತ್ರದಲ್ಲಿ ಆರೋಗ್ಯ ಶಿಬಿರ ನಡೆಸುವ ಮೂಲಕ ಉತ್ತಮ ಸೇವೆ ಮಾಡುವಲ್ಲಿ ವೈದ್ಯರ ಗೆಳೆಯರ ಬಳಗ ಹಾಗೂ ಪತ್ನಿ ಪುಷ್ಪಾ ಅವರ ಸಹಕಾರ ಹೆಚ್ಚಿನದಾಗಿದೆ ಎಂದರು.
ಈ ಸಂದರ್ಭದಲ್ಲಿ ವೈದ್ಯರು, ಡಾ ಎನ್ ಟಿ ಶ್ರೀನಿವಾಸ್ ಬಳಗ ಇತರರು ಉಪಸ್ಥಿತರಿದ್ದರು.