ಆರೋಗ್ಯ ವ್ಯವಸ್ಥೆ ಬಲಗೊಳಿಸುವ ಅಂಶ ಸೇರ್ಪಡಿಸಲು ಮನವಿ

ದಾವಣಗೆರೆ. ಏ.೨೬: ನಮ್ಮ ಕರ್ನಾಟಕದಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆ ಇಲ್ಲವಾಗಿದ್ದು, ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಗೊಳಿಸುವ ಅಂಶವನ್ನು ಸೇರ್ಪಡೆ ಮಾಡುವಂತೆ ಕರ್ನಾಟಕ ಡ್ರಗ್ ಆಕ್ಷನ್ ಫೋರಂ ಧಾರವಾಡದ ಅಧ್ಯಕ್ಷ ಡಾ. ಗೋಪಾಲ್ ದಾಬಡೆ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಜನರ ಆರೋಗ್ಯವನ್ನು ಸುಧಾರಿಸಲು  ಕೆಲ ಶಿಫಾರಸ್ಸುಗಳನ್ನು ಸಿದ್ಧಪಡಿಸಿದ್ದು, ಇಂದು ಎಲ್ಲಾ ಪಕ್ಷಗಳ ಅಭ್ಯರ್ಥಿಗಳಿಗೆ ಪ್ರತಿಯನ್ನು ಸಲ್ಲಿಸಿ, ಒತ್ತಾಯಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವತ್ರಿಕ ಆರೋಗ್ಯ ಆಂದೋಲನವು ಗಾರ್ಮೆಂಟ್ಸ್, ಕಟ್ಟಡ, ಬೀಡಿ ಕಾರ್ಮಿಕರು, ದಲಿತ ಗುಂಪುಗಳು, ಲೈಂಗಿಕ ಅಲ್ಪಸಂಖ್ಯಾತರು, ರೈತರು ಗುಂಪುಗಳು ಇನ್ನಿತರ ಸಂಘಟನೆಗಳು ಸೇರಿ ರಾಜ್ಯದಲ್ಲಿ ಸಾರ್ವತ್ರಿಕ ಆರೋಗ್ಯ ವ್ಯವಸ್ಥೆ ಮೂಲಕ ಆರೋಗ್ಯದ ಹಕ್ಕಿನ ಕನಸನ್ನು ನನಸಾಗಿಸಲು ಕಾರ್ಯನಿರ್ವಹಿಸುತ್ತೇವೆ ಎಂದರು.ದಕ್ಷಿಣ ಭಾರತದ ನೆರೆರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಆರೋಗ್ಯ ಸ್ಥಿತಿಯು ಕಳಪೆಯಾಗಿದೆ. ತಾಯಂದಿರ ಮರಣ ಪ್ರಮಾಣ ಹೆಚ್ಚು ಇದೆ. ೫ ವರ್ಷದೊಳಗಿನ ಮಕ್ಕಳ ಮರಣ ಸಂಖ್ಯೆ ದೇಶದಲ್ಲಿ 35 ಇದ್ದರೆ, ರಾಜ್ಯದಲ್ಲಿ 30 ಇದೆ. ಉಚಿತ ಆರೋಗ್ಯ ವ್ಯವಸ್ಥೆ ಇಲ್ಲದ ಕಾರಣ ಬಿಪಿಎಲ್ ಕಾರ್ಡ್ ದಾರರ ಸಂಖ್ಯೆ ಹೆಚ್ಚುತ್ತಿದೆ ಎಂದರು.ತಮಿಳುನಾಡಿನಲ್ಲಿ ಉಚಿತ ಆರೋಗ್ಯ ವ್ಯವಸ್ಥೆ ಇದ್ದು, ನಮ್ಮಲ್ಲೂ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣ ವೆಚ್ಚ ಭರಿಸುವಂತಾಗ ಬೇಕು. ಹಾಗೂ ಎಲ್ಲಾ ಔಷಧಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ದೊರಕುವಂತಾಗಬೇಕು ಇತ್ಯಾದಿ ಶಿಫಾರಸ್ಸುಗಳನ್ನು ಪ್ರನಾಳಿಕೆಯಲ್ಲಿ ಸೇರ್ಪಡೆಗೊಳಿಸಲು ಮನವಿ ಮಾಡಲಾಗುವುದು ಎಂದರು.ಎಂ. ಕರಿಬಸಪ್ಪ ಮಾತನಾಡಿ, ದಾವಣಗೆರೆಗೆ ಮೆಡಿಕಲ್ ಕಾಲೇಜು ತರಬೇಕು. ಆದರೆ ಖಾಸಗೀಕರಣ ಮಾಡುವುದು ಬೇಡ ಎಂದರು. ಸುದ್ದಿಗೋಷ್ಠಿಯಲ್ಲಿ ಜಬೀನಾಖಾನಂ, ನಗೀನಾಬಾನು, ಹಸೀನಾ ಬಾನು, ಶಾಹೀನಾ, ನಾಜೀಮಾ, ಫಾತೀಮಾ ಇನ್ನಿತರರಿದ್ದರು.