ಆರೋಗ್ಯ ರಕ್ಷಣೆಗೆ ಅಯ್ಯಂಗಾರ್ ಕೊಡುಗೆ ಅನನ್ಯ

ಕೋಲಾರ,ನ,೪-ಇಡೀ ಪ್ರಪಂಚಕ್ಕೆ ಯೋಗದ ಮೂಲಕ ಆರೋಗ್ಯ ರಕ್ಷಣೆಯ ಮಹತ್ವ ತಿಳಿಸಿಕೊಟ್ಟ ಬಿಕೆಎಸ್ ಅಯ್ಯಾಂಗಾರರು, ತಮ್ಮ ಹುಟ್ಟೂರಿನ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಆರೋಗ್ಯದ ಕೊಡುಗೆ ನೀಡಿದ್ದು, ಇದನ್ನು ಈ ಭಾಗದ ಜನತೆ ಸದುಪಯೋಗಪಡಿಸಿಕೊಳ್ಳಬೇಕು, ಇಂತಹ ಸಂಸ್ಥೆಗಳಿಗೆ ಕೇಂದ್ರ,ರಾಜ್ಯ ಸರ್ಕಾರಗಳು ಉತ್ತೇಜನ ನೀಡಬೇಕು ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬೆಳ್ಳೂರಿನ ಕೃಷ್ಣಮಾಚಾರ್ ಮತ್ತು ಶೇಷಮ್ಮ ಸ್ಮಾರಕ ನಿಧಿಟ್ರಸ್ಟ್ ಹಾಗೂ ರಮಾಮಣಿ ಸುಂದರರಾಜ ಅಯ್ಯಾಂಗಾರ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಶ್ರೀಮತಿ ರಮಾಮಣಿ ಸುಂದರರಾಜ ಅಯ್ಯಾಂಗಾರ್ ಅವರ ೯೬ನೇ ಜನ್ಮದಿನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಇದರ ಅಂಗವಾಗಿ ನಡೆಸಲಾಗಿದ್ದ ವಿವಿಧ ಸಾಂಸ್ಕೃತಿಕ,ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿವಿಧ ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು..
ಈ ಭಾಗದ ೫೦ಕ್ಕೂ ಹೆಚ್ಚು ಹಳ್ಳಿಗಳ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೌಲಭ್ಯ ಒದಗಿಸಲು ಬಿಕೆಎಸ್ ಅಯ್ಯಾಂಗಾರರು ಮುಂದಾಗಲು ಅವರ ಎಲ್ಲಾ ಕಾರ್ಯಗಳಿಗೂ ಸಹಕಾರ ನೀಡಿದ ರಮಾಮಣಿ ಅಮ್ಮನವರ ಹೃದಯವಂತಿಕೆಯೂ ಕಾರಣ, ಮಹಿಳೆಯ ಸಹಕಾರವಿದ್ದರೆ ಮಾತ್ರ ಕುಟುಂಬ, ಸಮಾಜದ ಪ್ರಗತಿ ಸಾಧ್ಯ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದರು.
ಸಮಾಜದ ಎಲ್ಲಾ ರಂಗಗಳಲ್ಲೂ ಇಂದು ಮಹಿಳೆಯರು ತಮ್ಮ ಸಾಮರ್ಥ್ಯ ತೋರಿಸಿದ್ದಾರೆ, ಶಾಸನ ಸಭೆಗಳಲ್ಲೂ ಅವರಿಗೆ ಮೀಸಲಾತಿ ನೀಡಲಾಗುತ್ತಿದೆ, ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಲು ಈ ಭಾಗದ ಹಳ್ಳಿಗಳ ಮಕ್ಕಳಿಗೆ ಟ್ರಸ್ಟ್ ನೆರವಾಗಿದೆ ಎಂದರು.
ಶಿಕ್ಷಣವೆಂದರೆ ಕೇವಲ ಓದು ಮಾತ್ರವಲ್ಲ ಅದರೊಂದಿಗೆ ಕ್ರೀಡೆ,ಸಾಂಸ್ಕೃತಿಕ ಚಟುವಟಿಕೆಗಳು, ಯೋಗ ಎಲ್ಲವೂ ಮುಖ್ಯವಾಗಿದೆ, ವಿದ್ಯಾರ್ಥಿಗಳಲ್ಲಿ ಆಸಕ್ತಿ ಮತ್ತು ಕ್ರಿಯಾಶೀಲತೆ ಹೆಚ್ಚಲು ಸಾಧ್ಯ ಎಂದ ಅವರು, ಆ ತಾಯಿಯ ಹೆಸರಲ್ಲಿ ಸ್ಥಾಪಿಸಿರುವ ರಮಾಮಣಿ ಶಿಕ್ಷಣ ಸಂಸ್ಥೆಗಳು ಈ ಭಾಗದ ಮಕ್ಕಳಿಗೆ ಸಮಗ್ರ ಶಿಕ್ಷಣದ ಕೊಡುಗೆ ನೀಡಿದೆ ಎಂದು ತಿಳಿಸಿದರು.
ಇಂದು ಪ್ರತಿಭೆ ಇದ್ದರೆ ಮಾತ್ರವೇ ಉತ್ತಮ ಬದುಕು ಸಾಧ್ಯ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜವಾಬ್ದಾರಿಯಿಂದ ವರ್ತಿಸಬೇಕು, ಸಿಕ್ಕಿರುವ ಅವಕಾಶ ಸದ್ಬಳಕೆ ಮಾಡಿಕೊಂಡು ಸಾಧನೆ ಮಾಡುವ ಛಲದೊಂದಿಗೆ ತಮ್ಮ ಅಭ್ಯಾಸ ಮುಂದುವರೆಸಬೇಕು ಎಂದು ಕಿವಿಮಾತು ಹೇಳಿದರು.
ವಿವೇಕಾನಂದ ಸಂಸ್ಥೆಗೆ ಟ್ರೋಫಿ
ಶ್ರೀಮತಿ ರಮಾಮಣಿ ಸುಂದರರಾಜ ಅಯ್ಯಾಂಗಾರ್ ಅವರ ೯೬ನೇ ಜನ್ಮದಿನೋತ್ಸವದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ಅತಿ ಹೆಚ್ಚು ಬಹುಮಾನ ಗಳಿಸಿರುವ ಹೊಸಕೋಟೆಯ ವಿವೇಕಾನಂದ ವಿದ್ಯಾಕೇಂದ್ರಕ್ಕೆ ಪ್ರೌಢಶಾಲಾ ಹಂತದ ಟ್ರೋಫಿ ಹಾಗೂ ಕಾಲೇಜು ಹಂತದ ಸ್ಪರ್ಧೆಗಳಲ್ಲಿ ಹೊಸಕೋಟೆಯ ಮಹಾದೇವ ಕಾಲೇಜಿಗೆ ಟ್ರೋಫಿ ಸಿಕ್ಕಿದ್ದು, ಸುದರ್ಶನ್ ವಿತರಿಸಿದರು.
ಇದೇ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷೆ ಡಾ.ಸವಿತಾರಘು, ಟ್ರಷ್ಟಿ ಭಾಷ್ಯಂ ರಘು, ಟ್ರಸ್ಟ್‌ನ ಅಡ್ವೈಸರ್ ಅನಂತಕೃಷ್ಣ ಬಿಕೆಎಸ್ ಅಯ್ಯಾಂಗಾರ್ ಹಾಗೂ ರಮಾಮಣಿ ಅಮ್ಮನವರ ಪುತ್ಥಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಿಕೆಎಸ್ ಅಯ್ಯಾಂಗಾರ್ ಅವರು ೯೦ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಖಾಸಗಿ ಟಿವಿಗೆ ನೀಡಿದ ಸಂದರ್ಶನ ಹಾಗೂ ರಮಾಮಣಿ ಅಮ್ಮನವರೊಂದಿಗಿನ ಜೀವನದ ಸಾಕ್ಷಾಚಿತ್ರವನ್ನು ಪ್ರದರ್ಶಿಸಲಾಯಿತು.ಸಂಸ್ಥೆಯ ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಮನೋಹರ್ ಬಹುಮಾನಗಳ ಪಟ್ಟಿ ಓದಿದರು. ಕಾಲೇಜಿನ ಪ್ರಾಂಶುಪಾಲೆ ಡಾ.ಛಾಯಾದೇವಿ,ಶಾಲಾ ವಿಭಾಗದ ಮುಖ್ಯಶಿಕ್ಷಕ ಮಾಲತೇಶ್, ಗ್ರಾಮದ ಶಾಲೆಯ ಮುಖ್ಯಶಿಕ್ಷಕಿ ಸುವರ್ಣಕುಮಾರಿ ಸೇರಿದಂತೆ ಎಲ್ಲಾ ಶಿಕ್ಷಕರು, ಉಪನ್ಯಾಸಕರು, ವಿವಿಧ ಶಾಲೆ,ಕಾಲೇಜುಗಳ ವಿದ್ಯಾರ್ಥಿಗಳು ಹಾಜರಿದ್ದರು.